ಬೆಂಗಳೂರು: ಕೋರ್ಟ್ ಕಲಾಪಗಳ ನೇರಪ್ರಸಾರದ (ಲೈವ್ ಸ್ಟ್ರೀಮಿಂಗ್) ದೃಶ್ಯಾವಳಿಗಳನ್ನು ಯಾವುದೇ ಖಾಸಗಿ ವೇದಿಕೆಗಳು ಬಳಸಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿರುವ ಹೈಕೋರ್ಟ್, ಖಾಸಗಿ ಡಿಜಿಟಲ್ ವೇದಿಕೆಗಳಾದ ಕಹಳೆ ನ್ಯೂಸ್, ಫ್ಯಾನ್ಸ್ ಟ್ರೋಲ್, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್‌ನಲ್ಲಿ ಬಳಸಲಾಗಿರುವ ವೀಡಿಯೋಗಳನ್ನು ತತ್‌ಕ್ಷಣ ತೆಗೆದು ಹಾಕುವಂತೆ ಯೂಟ್ಯೂಬ್, ಫೇಸ್‌ಬುಕ್ ಹಾಗೂ ಎಕ್ಸ್ ಕಾರ್ಪ್ ಸಂಸ್ಥೆಗಳಿಗೆ ನಿರ್ದೇಶಿಸಿದೆ.
ಕೋರ್ಟ್ ಕಲಾಪದ ದೃಶ್ಯಾವಳಿಗಳ ದುರ್ಬಳಕೆ ತಡೆಗೆ ಕ್ರಮ ಜರಗಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ| ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತು.
2022ರ ಜನವರಿ 1ರಂದು ರಾಜ್ಯ ಹೈಕೋರ್ಟ್ ಜಾರಿಗೊಳಿಸಿರುವ “ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್ ಸ್ಟ್ರೀಮಿಂಗ್) ಮತ್ತು ರೆಕಾರ್ಡಿಂಗ್ ನಿಯಮಗಳು 2021’ರ ನಿಯಮಗಳನ್ನು ಎಲ್ಲರೂ ಪಾಲಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಮಾಡಿತು.