ವಿಜಯಪುರ: ಆಡಳಿತದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಬಾರದು. ಎಲ್ಲರೂ ಹೋಗಿ ರಾಜ್ಯಪಾಲರಿಗೆ ದೂರು ಕೊಡುವುದು, ಅವರು ಅದನ್ನು ಪರಿಗಣಿಸುವುದು ಆಗಬಾರದು ಎಂದು ಸಚಿವ ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಇದು ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಿನ ಸಂಘರ್ಷವಲ್ಲ.
ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯಾಗಿದೆ, ಅವರು ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಹಾದಿಯಲ್ಲಿ ಹೋಗುವವರು ಬಂದು ಸಿಕ್ಕ ಸಿಕ್ಕವರ ಮೇಲೆ ಅರ್ಜಿ ಹಾಕಿದರೆ ಹೇಗೆ ಎಂದರು.
ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಸರಿಯಲ್ಲ. ಎಲ್ಲರ ದೂರು ಪರಿಗಣಿಸಿದರೆ, ಪೊಲೀಸ್ ಠಾಣೆ ಬದಲಿಗೆ ರಾಜ್ಯಪಾಲರಿಗೆ ದೂರು ಕೊಡುವುದು ಆಗುತ್ತದೆ. ಅಲ್ಲದೇ, ರಾಜ್ಯಪಾಲರಿಗೆ ದೂರು ಕೊಡೊದೇ ಹೊಸ ದಂಧೆ ಶುರು ಆಗುತ್ತದೆ. ರಾಜ್ಯಪಾಲರ ಹಸ್ತಕ್ಷೇಪದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದರು.