ಬೆಂಗಳೂರು: ತಿರುಪತಿ (Thirupathi) ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಕೆ ನಿಲ್ಲಿಸಿ ಪಾವಿತ್ರ್ಯತೆಗೆ ಒತ್ತು ನೀಡುವ ಸಲುವಾಗಿ ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನ) ಈಗ ಮತ್ತಷ್ಟು ನಂದಿನಿ ತುಪ್ಪ ಪೂರೈಕೆಗಾಗಿ ಕೆಎಂಎಫ್ ಗೆ ಮನವಿ ಮಾಡಿದ್ದರಿಂದ ನಂದಿನಿ ತುಪ್ಪದ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿದೆ.
ಅದಕ್ಕಾಗಿ ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಮಾರ್ಗ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ತಿರುಮಲಕ್ಕೆ ಕಳುಹಿಸುವ ತುಪ್ಪದ ಟ್ಯಾಂಕರ್‌ಗಳಿಗೆ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) , ಎಲೆಕ್ಟ್ರಿಕ್ ಲಾಕಿಂಗ್ ಅಳವಡಿಸಲು ಮುಂದಾಗಿದೆ.
ತಿರುಮಲಕ್ಕೆ ಒಟ್ಟಾರೆ 3 ತಿಂಗಳಿಗೆ 350 ಟನ್ ತುಪ್ಪ ನೀಡುವಂತೆ ಕೆಎಂಎಫ್‌ನೊಂದಿಗೆ ಟಿಟಿಡಿ ಒಪ್ಪಂದ ಮಾಡಿಕೊಂಡಿತ್ತು. ಹಿಂದೆ ಟಿಟಿಡಿ ಮಾಡಿಕೊಂಡ ಒಪ್ಪಂದ ಇನ್ನೂ ಒಂದೂವರೆ ತಿಂಗಳಲ್ಲಿ ಮುಕ್ತಾಯವಾಗಲಿದೆ. ಒಂದು ತಿಂಗಳ ಹಿಂದೆ ಟಿಟಿಡಿ ಕೆಎಂಎಫ್‌ಗೆ ತುಪ್ಪದ ಟೆಂಡರ್ ಒದಗಿಸಿದೆ.
ವಾಹನಗಳಿಗೆ ಜಿಪಿಎಸ್ ಟ್ರ್ಯಾಕ್ ಅಳವಡಿಕೆ: ಕೆಎಂಎಫ್ ಎಂಡಿ
ಈ ಬಗ್ಗೆ ಬೆಂಗಳೂರಿನಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಜಗದೀಶ್ ಮಾತನಾಡಿ, ಟಿಟಿಡಿಗೆ ತೆರಳುವ ನಂದಿನಿ ತುಪ್ಪದ ವಾಹನಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ವಾಹನಗಳಿಗೆ ಜಿಪಿಎಸ್ ಟ್ರ್ಯಾಕ್, ಎಲೆಕ್ಟ್ರಿಕ್ ಡೋರ್ ಅಳವಡಿಸಿದ್ದು, ಪ್ರಯೋಗಾಲಯ ಪರೀಕ್ಷೆ ಬಳಿಕ ನಂದಿನಿ ತುಪ್ಪ ಪೂರೈಸಲಾಗುತ್ತದೆ. ಈ ಹಿಂದೆ ಇದ್ದ ಸರ್ಕಾರದಲ್ಲಿ ಟಿಟಿಡಿಗೆ ತುಪ್ಪ ಪೂರೈಕೆ ಮಾಡಿರಲಿಲ್ಲ. ಇದೀಗ ಟಿಟಿಡಿ ಬೇಡಿಕೆ ಮೇರೆಗೆ ನಂದಿನಿ ತುಪ್ಪ ಪೂರೈಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮುಜರಾಯಿ ದೇಗುಲಗಳಿಗೆ ನಂದಿನಿ ತುಪ್ಪ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಬೇರೆ ರಾಜ್ಯಗಳಿಂದಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಪ್ರತಿದಿನ 15 ಲಕ್ಷ ಲೀಟರ್ ಹಾಲಿನಿಂದ ತುಪ್ಪ ತಯಾರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.