ಹುಬ್ಬಳ್ಳಿ: ಮೈತುಂಬಾ ಚೆಂದದ ವಸ್ತ್ರ… ಮುಖದ ಮೇಲೆ ಚಿತ್ತಾರ…ಕೋಡಿನ ಮೇಲೆ ಉದ್ದದ ಕಿರೀಟ… ಸರ್ವಾಲಂಕಾರಭೂಷಿತರಾದ ಈ ‘ಸುಂದರ’ರನ್ನು ನೀವು ನೋಡಲು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿಮೇಳಕ್ಕೆ ಬರಬೇಕು.
ನೂರಾರು ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಗೆದ್ದ ಹೋರಿಗಳು, ಅವುಗಳಿಗೆ ಮಾಡಿದ ಸಿಂಗಾರ ಈ ಬಾರಿಯ ಮೇಳದ ವಿಶೇಷತೆಗಳಲ್ಲೊಂದು.
ರೈತರು, ಸಾರ್ವಜನಿಕರು ಆಸಕ್ತಿಯಿಂದ ಇವುಗಳನ್ನೇ ನೋಡಲು ಮುಗಿಬಿದ್ದಾಗ, ಒಮ್ಮೆ ದುರುಗುಟ್ಟಿ ನೋಡಿ, ಇನ್ನೊಮ್ಮೆ ನಾಚಿ ಹಿಂದೆ ಸರಿಯುವ ಹೋರಿಗಳ ಸೊಬಗು ಕಣ್ಣಿಗೆ ಹಬ್ಬದಂತಿದೆ.
‘ರಾಣೆಬೆನ್ನೂರ ಕ ರಾಜ’, ‘ತಡಸನಳ್ಳಿ ಶ್ರೀರಾಮ ಗೆಳೆಯರ ಬಳಗದ ಕೊಲೆಗಾರ’, ‘ಶಿರಾಳಕೊಪ್ಪದ ಎ-1 ಡಾನ್’ ಹೋರಿಗಳು ಹೆಸರಿನಷ್ಟೇ ವಿಶೇಷವಾಗಿವೆ.
‘ಹಾವೇರಿ, ಶಿವಮೊಗ್ಗ ಭಾಗದಲ್ಲಿ ನಡೆದ 100ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ‘ತಡಸನಹಳ್ಳಿ ಕೊಲೆಗಾರ’ ಸ್ಪರ್ಧಿಸಿದ್ದು, 25ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಹಲವು ಸ್ಪರ್ಧೆಗಳಲ್ಲಿ ಬಂಗಾರ, ಬೆಳ್ಳಿ ಗೆದ್ದಿದೆ. ಹಾನಗಲ್‌ನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಬುಲೆಟ್ ಬೈಕ್ ಗೆದ್ದಿದೆ’ ಎಂದು ಹೋರಿಯ ಮಾಲೀಕರಾದ ಅಜಿತ್ ಹಾಗೂ ಮಹೇಶ ತಿಳಿಸಿದರು.