ಗುಡಗೇರಿ: ಕುಂದಗೋಳ ತಾಲ್ಲೂಕಿನಲ್ಲಿ ಬಹುತೇಕರು ಕೃಷಿಯನ್ನೆ ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದು, ಸಮರ್ಪಕವಾಗಿ ಮಾಹಿತಿ ನೀಡಬೇಕಾದ ಕೃಷಿ ಇಲಾಖೆಯಲ್ಲಿ ಅಧಿಕಾರಿ ಹುದ್ದೆ ಖಾಲಿ ಇರುವುದರಿಂದ ಈ ಇಲಾಖೆ ಇದ್ದುಇಲ್ಲದಂತೆ ಆಗಿದೆ.
ತಾಲ್ಲೂಕಿನಲ್ಲಿ ಒಟ್ಟು 58 ಸಾವಿರ ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ.
ಆದರೆ ಕೃಷಿಗೆ ಪೂರಕವಾದ ಮಾಹಿತಿ ಕೂರತೆಯಿಂದಾಗಿ ರೈತರು ಲಾಭದಾಯಕ ಬೆಳೆ ಬೆಳೆಯಲು ವಿಫಲರಾಗುತ್ತಿದ್ದಾರೆ, ಮೆಣಸಿನಕಾಯಿ ಈ ಭಾಗದಲ್ಲಿ ಪ್ರಸಿದ್ದಿ ಬೆಳೆ. ಆದರೆ ಇಳುವರಿ ಕುಂಠಿತದಿಂದ ರೈತರು ಬೆಳೆ ಬೆಳೆಯದೇ ಕೈಬಿಟ್ಟಿದ್ದಾರೆ ಎಂದು ಬಾಹುಬಲಿ ಸೋಮಾಪೂರ ಬೇಸರ ವ್ಯಕ್ತಪಡಿಸಿದರು.
‘ಸುಧಾರಿತ ಕೃಷಿ ಪದ್ದತಿ ಅಳವಡಿಸಿಕೊಳ್ಳಿ ಎಂದು ಕೃಷಿ ವಿಶ್ವವಿದ್ಯಾನಿಲಯ, ಸರ್ಕಾರ ಅನೇಕ ತರಹದ ತಾಂತ್ರಿಕತೆಯ ಮೂಲಕ ಪ್ರಚಾರ ಮಾಡುತ್ತಿದೆ. ಭೌತಿಕವಾಗಿ ರೈತರಿಗೆ ಹೊಲದಲ್ಲಿ ತರಬೇತಿ ನೀಡುವ ಕೃಷಿ ಸಹಾಯಕರು ಇಲ್ಲದೆ ಇರುವುದರಿಂದ ರೈತರಿಗೆ ಸೂಕ್ತ ಮಾಹಿತಿ ದೊರೆಯದೇ ಕೈಸುಟ್ಟಿಕೊಳ್ಳುವಂತಾಗಿದೆ’ ಎಂದು ಗಂಗಾಧರ ಗಿರಮಲ್ಲ ಹೇಳುತ್ತಾರೆ.