ಹುಬ್ಬಳ್ಳಿ: ‘ತಿರುಪತಿ ಸರ್ವಧರ್ಮಗಳ ಶಕ್ತಿ ಕೇಂದ್ರ. ಅಲ್ಲಿ ನೀಡುವ ಪ್ರಸಾದವಾದ ಲಾಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಇರುವ ತುಪ್ಪ ಬಳಕೆ ಮಾಡಿರುವುದು ಸರಿಯಲ್ಲ’ ಎಂದು ಹುಬ್ಬಳ್ಳಿ ತಾಲ್ಲೂಕು ವರೂರಿನ ನವಗ್ರಹತೀರ್ಥ ಕ್ಷೇತ್ರದ ಗುಣಧರನಂದಿ ಮಹಾರಾಜರು ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರಾದರೂ ಪ್ರಸಾದದ ಮೂಲಕ ಮಾಂಸಾಹಾರ ಸೇವನೆ ಮಾಡಿಸುವ ದುಷ್ಟ ಪ್ರಯತ್ನ ಮಾಡಿದ್ದರೆ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಅವರನ್ನು ದೇಶದಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ವಯಸ್ಸಿನಲ್ಲಿ ಅವರ ಮೇಲೆ ಆರೋಪ ಮಾಡಿ, ಹೊಲಸು ರಾಜಕಾರಣ ಮಾಡಬಾರದು. ಸಿದ್ದರಾಮಯ್ಯ ಪ್ರಾಮಾಣಿಕವಾಗಿ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಂತೆ ಅವರಿಗೆ ಮಾಡಬಾರದು’ ಎಂದು ಹೇಳಿದರು.
ಕ್ಷಮಾವಳಿ ದಿನ ಘೋಷಿಸಿ: ‘ಜೈನ ಸಮಾಜದಿಂದ ನಡೆಯವ ‘ಕ್ಷಮಾವಳಿ ಪರ್ವ’ ರಾಷ್ಟ್ರೀಯ ಕಾರ್ಯಕ್ರಮ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ಷಮಾವಳಿ ದಿನ ಆಚರಣೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದರು.