ನವದೆಹಲಿ: ಐಪಿಎಲ್ 18ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನವೆಂಬರ್ 3 ಅಥವಾ 4ನೇ ವಾರದಲ್ಲಿ ನಡೆಯಲಿದೆ. ಈ ಬಾರಿ ಮೆಗಾ ಹರಾಜು ಪ್ರಕ್ರಿಯೆಯನ್ನು ವಿದೇಶಿ ನೆಲದಲ್ಲಿ ಆಯೋಜಿಸುವ ಯೋಜನೆಯನ್ನೂ ಬಿಸಿಸಿಐ ಹಾಕಿಕೊಂಡಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ವಿದೇಶಿ ನೆಲದಲ್ಲಿ ಅಂದರೆ ದುಬೈನಲ್ಲಿ ನಡೆದಿತ್ತು.
ಈ ಸಲವೂ ಮಧ್ಯಪ್ರಾಚ್ಯ ದೇಶದಲ್ಲೇ ಹರಾಜು ನಡೆಸಲು ಬಿಸಿಸಿಐ ಮುಂದಾಗಿದೆ. ಗಲ್ಫ್ ನಗರಗಳಾದ ದೋಹಾ, ಮಸ್ಕತ್ ಅಥವಾ ಅಬುಧಾಬಿಯಲ್ಲಿ ನಡೆಸುವ ಸಾಧ್ಯತೆ ಹೆಚ್ಚಿದೆ. ಜತೆಗೆ ಸೌದಿ ಅರೇಬಿಯಾ ಕೂಡ ರೇಸ್ನಲ್ಲಿದೆ. ಸೌದಿ ಇತ್ತೀಚೆಗೆ ಕ್ರೀಡೆಯಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದು, ಐಪಿಎಲ್ ಹರಾಜಿನ ಆತಿಥ್ಯಕ್ಕೂ ಆಸಕ್ತಿ ತೋರಿದೆ. ಆದರೆ ಸದ್ಯಕ್ಕೆ ಬಿಸಿಸಿಐ ಯಾವ ನಗರವನ್ನೂ ಅಂತಿಮಗೊಳಿಸಿಲ್ಲ.
ಹಾಲಿ ಮಾಸಾಂತ್ಯದೊಳಗೆ ಆಟಗಾರರ ರಿಟೇನ್ ನಿಯಮಾವಳಿಯನ್ನು ಬಿಸಿಸಿಐ ಪ್ರಕಟಿಸಲಿದೆ. ಇದರಿಂದ ಎಲ್ಲ ತಂಡಗಳಿಗೆ ಮೆಗಾ ಹರಾಜಿಗೆ ಸಿದ್ಧತೆ ನಡೆಸಲು ಸುಮಾರು ಎರಡು ತಿಂಗಳ ಕಾಲಾವಕಾಶ ಲಭಿಸಲಿದೆ. ರಿಟೇನ್ ಪಟ್ಟಿ ಅಂತಿಮಗೊಳಿಸಲು ತಂಡಗಳಿಗೆ ಬಿಸಿಸಿಐ ನವೆಂಬರ್ 15ರವರೆಗೆ ಸಮಯ ನೀಡುವ ನಿರೀಕ್ಷೆ ಇದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಡಿಸೆಂಬರ್ 1ರಂದು ಐಸಿಸಿಯ ಹೊಸ ಚೇರ್ಮನ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹೀಗಾಗಿ ಅದಕ್ಕೆ ಮುನ್ನ ನವೆಂಬರ್ನಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿಸುವುದು ಬಿಸಿಸಿಐ ಯೋಜನೆಯಾಗಿದೆ. ಈ ಬಾರಿ ಮೆಗಾ ಹರಾಜು ನಡೆಯಲಿರುವುದರಿಂದ 2 ದಿನಗಳ ಕಾಲ ಪ್ರಕ್ರಿಯೆ ಸಾಗಲಿವೆ.