ಕನ್ನಡ ಚಿತ್ರರಂಗದ ಬಹುದಿನಗಳ ಕನಸು ಇದೀಗ ನನಸಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಫಿಲ್ಮ್ ಸಿಟಿ ಬೇಕು ಎನ್ನುವುದು ದಶಕಗಳ ಕನಸು. ಮೈಸೂರಿನಲ್ಲಿ ಫಿಲ್ಮ್ ಸಿಟಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿತ್ತಾದರೂ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕನ್ನಡ ಚಿತ್ರರಂಗದ ಚಿತ್ರೀರಕಣ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಫಿಲ್ಮ್ ಸಿಟಿಯ ಜಾಗಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವೇ ಮಧ್ಯಪ್ರವೇಶಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಹಿಂದಿ ಹಾಗೂ ತೆಲುಗು ಚಿತ್ರರಂಗಗಳಿಗೆ ಇರುವ ಮಾದರಿಯಲ್ಲೇ ಕನ್ನಡ ಚಿತ್ರರಂಗಕ್ಕೂ ಫಿಲ್ಮ್ ಸಿಟಿ ನಿರ್ಮಾಣವಾಗಬೇಕು ಎನ್ನುವುದು ಕನ್ನಡ ಚಿತ್ರರಂಗದ ಬಹುದಿನಗಳ ಕನಸು.ಆದರೆ, ಈ ವಿಷಯ ಚರ್ಚೆಯ ಮುನ್ನೆಲೆಗೆ ಬಂದಷ್ಟು ಮತ್ತೆ ಹಿನ್ನಡೆ ಅನುಭವಿಸಿದ್ದೇ ಹೆಚ್ಚು. ಇದೀಗ ಫಿಲ್ಮ್ ಸಿಟಿಗೆ ಜಾಗ ನಿಗದಿಯಾಗಿದೆ. ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿಗಾಗಿ 110 ಎಕರೆಯನ್ನು ಮೀಸಲಿರಿಸಲಾಗಿದೆ. ಉದ್ದೇಶಿತ ಯೋಜನೆಯ ಅನುಷ್ಠಾನಕ್ಕಾಗಿ ಅವಶ್ಯವಿರುವ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ ವಾರ್ತಾ ಇಲಾಖೆಗೆ ವರ್ಗಾಯಿಸುವಂತೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಫಿಲ್ಮ್ ಸಿಟಿ ನಿರ್ಮಾಣದ ಎರಡನೇ ಹಂತದ ಯೋಜನೆಗೆ ಸಂಬಂಧಿಸಿದಂತೆ 50 ಎಕರೆ ಜಾಗ ಗುರುತಿಸುವಂತೆಯೂ ಅಧಿಕಾರಿಗಳಿಗೆ ಸಿ.ಎಂ ನಿರ್ದೇಶನ ನೀಡಿದರು.
ಫಿಲ್ಮ್ ಸಿಟಿ ನಿರ್ಮಾಣದ ಪ್ರಗತಿ ಹಾಗೂ ಮುಂದಿನ ಹಂತದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ನಟ ಹಾಗೂ ನಟಿಯರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಫಿಲ್ಮ್ ಸಿಟಿ ನಿರ್ಮಾಣದ ರೂಪುರೇಷಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ.