ಹೊಸದಿಲ್ಲಿ: ಬಿಸಿಸಿಐನ “ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಪಾಲಿಸಿ’ ಯಂತೆ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಿಂದ ಆರಂಭಕಾರ ಶುಭಮನ್ ಗಿಲ್ ಸೇರಿದಂತೆ ಕೆಲವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.
3 ಪಂದ್ಯಗಳ ಟಿ20 ಸರಣಿ ಅ. 7ರಂದು ಆರಂಭವಾಗಲಿದ್ದು, ಇದು ಮುಗಿದ ಮೂರೇ ದಿನದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿ ಮೊದಲ್ಗೊಳ್ಳಲಿದೆ.
ಹೀಗಾಗಿ ಗಿಲ್ ಅವರಿಗೆ ಹೆಚ್ಚಿನ ವಿಶ್ರಾಂತಿ ಲಭಿಸುತ್ತದೆ ಎಂಬುದು ಬಿಸಿಸಿಐ ಲೆಕ್ಕಾಚಾರ. ಇದನ್ನು ಬಿಸಿಸಿಐ ಮೂಲವೂ ದೃಢಪಡಿಸಿದೆ. ಉಳಿದಂತೆ ಜಸ್‌ಪ್ರೀತ್ ಬುಮ್ರಾ ಮತ್ತು ಸಿರಾಜ್ ಕೂಡ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.
ಈ ಯಾದಿಯಲ್ಲಿ ರಿಷಭ್ ಪಂತ್ ಹೆಸರು ಕೂಡ ಕೇಳಿ ಬರುತ್ತಿದೆ. ಆಗ ಇಶಾನ್ ಕಿಶನ್ ಮರಳಿ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.
ಭಾರತಕ್ಕೀಗ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಮುಖ್ಯವಾದ ಕಾರಣ ಬಿಸಿಸಿಐ ಟಿ20 ಪಂದ್ಯಗಳಿಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಎಂದೂ ಮಂಡಳಿ ಅಧಿಕಾರಿಯೊಬ್ಬರು ಹೇಳಿದ್ದಾರೆ.