ಬೆಂಗಳೂರು: “ತಪ್ಪಾಗಿದೆ, ಸರಿಪಡಿಸಿ ಕೊಳ್ಳೋಣ…’ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಆಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಪ್ರತಿಕ್ರಿಯಿಸುವ ಮೂಲಕ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ವಿಧಾನಸೌಧದ ಮುಂಭಾಗ ರವಿವಾರ ಪ್ರಜಾಪ್ರಭುತ್ವ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಹಣ ನೀಡಲು ದೇಶದಲ್ಲೇ ಮೊದಲ ಬಾರಿಗೆ ಕಾನೂನು ತಂದವರು ನಾವು. ನೀವು ಏನು ಮಾಡಿದಿರಿ? ಕೇವಲ ಟೀಕೆ ಮಾಡಿದರೆ ಸಾಕೇ? ಕೇಂದ್ರ ಸರಕಾರ ಈ ಬಾರಿ 48 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದೆ. ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟದ್ದು ಬರೀ 60 ಸಾವಿರ ಕೋಟಿ ರೂ. ಜನಸಂಖ್ಯೆಗೆ ಅನುಗುಣವಾಗಿ ಹಣ ಕೊಡಿ ನೋಡೋಣ ಎಂದು ಸವಾಲು ಹಾಕಿದರು.
ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಎಸ್‌ಸಿಎಸ್‌ಪಿ-ಟಿಎಸ್‌ಪಿ)ಗೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದ್ದೇವೆ ಎಂದು ಬಿಜೆಪಿಯವರು ಆರೋಪಿಸಿದ್ದಾರೆ. ತಪ್ಪಾಗಿದೆ, ಸರಿಪಡಿಸಿಕೊಳ್ಳೋಣ. ಈ ಕಾಯ್ದೆ ಜಾರಿಗೊಳಿಸಿ, ಆ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಶೇ. 24.1ರಷ್ಟು ಹಣ ಕೊಟ್ಟೆವು. ಆದರೆ ಬಿಜೆಪಿಯವರು ಏನು ಮಾಡಿದಿರಿ ಎಂದು ಪ್ರಶ್ನಿಸಿದರು.