ಬೆಂಗಳೂರು: ಇಂದು ಗಣೇಶ ಚತುರ್ಥಿ ಹಬ್ಬ. ಕರ್ನಾಟಕ, ಭಾರತದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಇಂತಹ ಹಬ್ಬವನ್ನು ಆರಂಭಿಸಿದ್ದೇ ಬಾಲ ಗಂಗಾಧರ ತಿಲಕ್ ಅವರು. ಅವರ ನಿಮಗೆ ತಿಳಿದಿರ ವಿಷಯವನ್ನು ಹಿರಿಯ ಪತ್ರಕರ್ತ ದಿನೇಶ್ ಅಮೀನಮಟ್ಟು ಈ ಕೆಳಗಿನಂತೆ ಹಂಚಿಕೊಂಡಿದ್ದಾರೆ ಓದಿ.
ಇಂದು ಗಣೇಶನ ಹಬ್ಬ. ಭಾರತದ ರಾಜಕೀಯ ಕ್ಷೇತ್ರದಲ್ಲಿ ಧರ್ಮದ ಪ್ರವೇಶಕ್ಕೆ ಕಾರಣವಾದ ಸಾರ್ವಜನಿಕ ಗಣೇಶೋತ್ಸವದ ರೂವಾರಿ ಬಾಲ ಗಂಗಾಧರ ತಿಲಕ್. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ರಾಜಕೀಯ ಕ್ಷೇತ್ರ ಪ್ರವೇಶಿಸಿದ ಧರ್ಮ ಕೋಮುವಾದದ ರೂಪ ಪಡೆದು ಎರಡೂ ಕ್ಷೇತ್ರಗಳು ದಾರಿ ತಪ್ಪಿರುವುದಕ್ಕೆ ತಿಲಕ್ ಅವರೇ ಹೊಣೆಗಾರರಾಗುತ್ತಾರೆ.
ತನ್ನದೊಂದು ತೀರ್ಮಾನ ಭವಿಷ್ಯದಲ್ಲಿ ಇಂತಹದ್ದೊಂದು ಅನಾಹುತಕ್ಕೆ ದಾರಿ ಮಾಡಿಕೊಡಬಹುದು ಎಂದು ಬಾಲ ಗಂಗಾಧರ ತಿಲಕ್ ಇಲ್ಲವೇ ಅವರ ತೀರ್ಮಾನವನ್ನು ಬೆಂಬಲಿಸಿದ್ದ ಮಹಾತ್ಮ ಗಾಂಧಿ ಊಹಿಸಿದ್ದರೇ? ಕೋಮುವಾದದ ಬೆಂಕಿಯನ್ನು ಆರಿಸುತ್ತಲೇ ಅದಕ್ಕೆ ಬಲಿಯಾದ ಗಾಂಧೀಜಿಯವರು ಇಂತಹದ್ದೊಂದು ಊಹೆ ಮಾಡಿದ್ದರೆಂದು ಅನಿಸುವುದಿಲ್ಲ. ಆದರೆ ತಿಲಕ್?
ಕಾಂಗ್ರೆಸ್ ಪಕ್ಷದೊಳಗೆ ಲಾಲ ಲಜಪತ್ ರಾಯ್ ಮತ್ತು ಬಿಪಿನ್ ಚಂದ್ರಪಾಲ್ ಜೊತೆ ಉಗ್ರ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಿದ್ದ ಬಾಲ ಗಂಗಾಧರ್ ತಿಲಕ್ ಗುಂಪು ಮತ್ತು ಹಿಂದು-,ಮುಸ್ಲಿಮ್ ಐಕ್ಯತೆ ಮತ್ತು ಸುಧಾರಣಾವಾದಿ ಚಿಂತನೆಗಳನ್ನು ಪ್ರತಿನಿಧಿಸುತ್ತಿದ್ದ ಗೋಪಾಲಕೃಷ್ಣ ಗೋಖಲೆ ನೇತೃತ್ವದ ಗುಂಪಿನ ನಡುವಿನ ಸೈದ್ಧಾಂತಿಕ ಸಂಘರ್ಷ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಭಾಗವಾಗಿದೆ. ವಿ.ಡಿ.ಸಾವರ್ಕರ್, ಬಿ.ಎಸ್.ಮೂಂಜೆ ಮತ್ತು ಬಾಲ ಗಂಗಾಧರ ತಿಲಕ್ ಅವರನ್ನು ಆರ್ ಎಸ್ ಎಸ್ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡಗೆವಾರ್ ತಮ್ಮ ಗುರುಗಳೆಂದು ಪರಿಗಣಿಸಿದ್ದರು.