ಚಿಕ್ಕೋಡಿ: ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿಗೆ ಕಾನೂನು ಮೂಲಕ ಹೋರಾಟ ನಡೆಸಲು ಪಂಚಮಸಾಲಿ ಲಿಂಗಾಯತ ಹೋರಾಟ ಸಮಿತಿ ನಿರ್ಧರಿಸಿದ್ದು, ಹೀಗಾಗಿ ಸೆ.22ರಂದು ಬೆಳಗಾವಿಯಲ್ಲಿ ಬೃಹತ್ ಪಂಚಮಸಾಲಿ ಲಿಂಗಾಯತ ವಕೀಲರ ಸಮಾವೇಶ ಆಯೋಜಿಸಲಾಗಿದೆ ಎಂದು ಕೂಡಲಸಂಗಮದ ಶ್ರೀ ಬಸವ ಜಯ ಮೃತುಂಜ್ಯಯ ಸ್ವಾಮೀಜಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಪಂಚಮಸಾಲಿ ಲಿಂಗಾಯತ ವಕೀಲರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ರಾಜ್ಯಾದ್ಯಂತ ಬೃಹತ್ ಹೋರಾಟದ ಬಳಿಕ ಬಿಜೆಪಿ ಸರ್ಕಾರದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದನೆ ನೀಡಿದಷ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸುತ್ತಿಲ್ಲ, ಅಧಿಕಾರ ಇರದಿದ್ದಾಗ ಗರ್ಜಿಸುವ ರಾಜಕಾರಣಿಗಳು ಅಧಿಕಾರ ಬಂದ ಮೇಲೆ ಯಾಕೆ ಮೌನ ವಹಿಸುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ, ಅಧಿಕಾರ ಇಲ್ಲದಿದ್ದಾಗ ಹೋರಾಟಕ್ಕೆ ಬಲ ಕೊಡುತ್ತೀರಾ ಅಧಿಕಾರ ಇದ್ದಾಗಲು ಬಲ ಕೊಡಬೇಕೆಂದು ನಮ್ಮ ಆಗ್ರಹ ಎಂದರು.
ಶಾಸಕರು ಸರಕಾರದ ಮೇಲೆ ಒತ್ತಡ ಹಾಕಲಿ:
ರಾಜ್ಯದಲ್ಲಿ 20 ಮಂದಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದ ಶಾಸಕರಿದ್ದಾರೆ. ಅಧೀವೇಶನದಲ್ಲಿ ಮೀಸಲಾತಿ ಕುರಿತು ಪ್ರಸ್ತಾಪಿಸಬೇಕೆಂದು ಹೇಳಿದಾಗ ಸ್ಪೀಕರ್ ಅವಕಾಶ ಕೊಡಲಿಲ್ಲ ಎನ್ನುವವರು ನೇರವಾಗಿ ಮುಖ್ಯಮಂತ್ರಿ ಜೊತೆ ಯಾಕೆ ಮಾತುಕತೆ ನಡೆಸಲಿಲ್ಲ, ಅಧಿಕಾರ ಶಾಶ್ವತವಲ್ಲ ಸಮಾಜ ಶಾಶ್ವತ ಎಂಬುದು ಅರಿತು ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.