ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ ಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು ಲೇಔಟ್ ಗಳ ಮಾಲೀಕರು ನಗರಸಭೆಯ ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಮತ್ತು ಲೇಔಟ್ ಗಳಲ್ಲಿ ಕಳಪೆ ಕಾಮಗಾರಿ ಮತ್ತು ಸುಳ್ಳು ಮಾಹಿತಿಯನ್ನು ನಗರಸಭೆಗೆ ನೀಡುತ್ತಿದ್ದಾರೆ.
ಅಂಥವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸದಸ್ಯರು ನಗರಸಭೆಯ ಅಧಿಕಾರಿಗಳನ್ನು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಇಂಥ ಲೇಔಟ್ ಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ನಗರಸಭೆಯ ಸಾಮಾನ್ಯ ಸಭೆಯ ಅನುಮತಿಯನ್ನು ಪಡೆದುಕೊಳ್ಳಬೇಕು. ಅಧ್ಯಕ್ಷರನ್ನು ಒಳಗೊಂಡಂತೆ ಒಂದು ಸಮಿತಿಯನ್ನು ನಿರ್ಮಿಸಬೇಕು ಎಂದು ನಗರಸಭೆಯ ಸದಸ್ಯರ ಸಂಜಯ ತೆಗ್ಗಿ ಸಭೆಗೆ ತಿಳಿಸಿದರು.
ಮತ್ತೊರ್ವ ಸದಸ್ಯ ಶ್ರೀಶೈಲ ಬೀಳಗಿ ಮಾತನಾಡಿ, ಲೇಔಟ್ ಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ನಗರಸಭೆಯ ರಸ್ತೆ, ಚರಂಡಿ ಸೇರಿದಂತೆ ಆಸ್ತಿಗಳನ್ನು ಹಾಳು ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಎಫ್ ಐ ಆರ್ ಮಾಡುವಂತೆ ಆಗ್ರಹಿಸಿದರು.
ಇ-ಆಸ್ತಿಗಳ ಗೊಂದಲದಿಂದಾಗಿ ಅವಳಿ ನಗರಗಳ ಸಾರ್ವಜನಿಕರಿಗೆ ಆಸ್ತಿಗಳ ನೊಂದಣಿ, ಮಾರಾಟ ಮತ್ತು ಖರೀದಿ ಮಾಡಲು ತೊಂದರೆಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಇದನ್ನು ಸರಳೀಕರಣಗೊಳಿಸಲು ತಿಳಿಸಿದರು.
ನಗರಸಭೆಯ ವ್ಯಾಪ್ತಿಯಲ್ಲಿ ಇಪ್ಪತ್ತು ಸಾವಿರ ಆಸ್ತಿಗಳಿವೆ. ಆದ್ದರಿಂದ ಆಸ್ತಿಗಳ ಮಾಲೀಕರು ತಮ್ಮ ಸೂಕ್ತ ದಾಖಲೆಗಳನ್ನು ನೀಡಿ ಆಸ್ತಿಗಳನ್ನು ಇ-ಆಸ್ತಿಕರಣಗೊಳಿಸಿಕೊಳ್ಳಬೇಕು ಎಂದು ಪೌರಾಯುಕ್ತ ಜಗದೀಶ ಈಟಿ ತಿಳಿಸಿದರು.