ಹುಬ್ಬಳ್ಳಿ, ಸೆಪ್ಟಂಬರ್ 03: ಕರ್ನಾಟಕ ರಾಜ್ಯಾದ್ಯಂತ ಗಣೇಶೋತ್ಸವ ಆಚರಣೆಗೆ ಸಕಲ ಸಿದ್ಧತೆಗಳು ಆರಂಭಗೊಂಡಿವೆ. ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದೆ. ವಿಜೃಂಭಣೆಯ ಸಂಭ್ರಮಾಚರಣೆಗೆ ಸಜ್ಜಾಗಿರುವ ಛೋಟಾ ಮುಂಬೈ ಹುಬ್ಬಳ್ಳಿ ಮಂದಿಗೆ ‘ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ’ (ಹೆಸ್ಕಾಂ) ಮಾರ್ಗ ಸೂಚಿ ಹೊರಡಿಸಿದೆ.
ಮುಂಜಾಗೃತೆಗಾಗಿ ಗಣೇಶ ಮಂಡಳಿಗಳಿಗೆ ಸೂಚನೆ ನೀಡಿದೆ.
ಹೌದು, ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ಹೆಸ್ಕಾಂ ಮಂಗಳವಾರ ಹೊರಡಿಸಿದೆ. ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಎಂಜಿನೀಯರ್ ಕಿರಣ್ ಕುಮಾರ್ ಬಿ ರವರು, ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನಧಿಕೃತವಾಗಿ ವಿದ್ಯುತ್ ಲೈನ್‌ಗಳಿಗೆ, ಮನೆಗಳಿಂದ ಹುಕ್ ಹಾಕಿ ವಿದ್ಯುತ್ ಸಂಪರ್ಕ ಪಡೆಯದಂತೆ ಕಟ್ಟುನಟ್ಟಿನ ಸೂಚನೆ ನೀಡಿದ್ದಾರೆ.
ಮಾರ್ಗಸೂಚಿಯ ಇತರ ಅಂಶಗಳ ವಿವರ
ಗಣೇಶೋತ್ಸವಕ್ಕಾಗಿ ಅಗತ್ಯ ವಿದ್ಯುತ್ ಸಂಪರ್ಕ ಪಡೆಯುವ ಮೊದಲು ಸಂಬಂಧಿಸಿದ ಹೆಸ್ಕಾಂ ವಿಭಾಗೀಯ ಅಥವಾ ಶಾಖಾ ಕಚೇರಿಗೆ ತೆರಳಿ ಅನುಮತಿ ಪಡೆಯಬೇಕು. ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಸುತ್ತಮುತ್ತ ಯಾವುದೇ ವಿದ್ಯುತ್ ಮಾರ್ಗಗಳು ಇಲ್ಲದ್ದನ್ನು ಗಮನಿಸಬೇಕು.