ಬೈಲಹೊಂಗಲ: ‘ಗೌರಿಗಣೇಶ ಹಬ್ಬವನ್ನು ಸಾರ್ವಜನಿಕರು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕು. ಗಜಾನನ ಯುವಕ ಮಂಡಳಿಗ ಹಿರಿಯರು, ಮುಖಂಡರು ಯಾವುದೇ ಅಹಿತಕರ ಘಟನೆಗಳು ಆಗದಂತೆ ಮುಂಜಾಗೃತಿವಹಿಸಬೇಕು’ ಎಂದು ತಹಶೀಲ್ದಾರ್ ಎಚ್.ಎನ್.ಶಿರಹಟ್ಟಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಗಣೇಶ ಹಬ್ಬ ಆಚರಣೆ ಅಂಗವಾಗಿ ಮಂಗಳವಾರ ಬೈಲಹೊಂಗಲ ಹಾಗೂ ನೇಸರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ ಉತ್ಸವ ಮಂಡಳಿಗಳಿಗೆ ಮಂಗಳವಾರ ನಡೆದ ಶಾಂತಿಪಾಲನೆ ಸಭೆ ನೇತೃತ್ವ ವಹಿಸಿ ಮಾತನಾಡಿದರು.
ಡಿವೈಎಸ್ಪಿ ರವಿ ನಾಯಕ ಮಾತನಾಡಿ, ‘ಸಾರ್ವಜನಿಕ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮಂಡಳಿಗಳು ಪೊಲೀಸ್ ಇಲಾಖೆ ನೀಡುವ ಸಲಹೆ-ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಂಡಳಿಯವರು ಗಣೇಶ ಮಂಟಪದಲ್ಲಿ ಕಡ್ಡಾಯವಾಗಿ ಸಿಸಿಟಿವ್ಹಿ ಅಳವಡಿಸಬೇಕು. ಹೆಸ್ಕಾಂ ಇಲಾಖೆಯಿಂದ ಅನುಮತಿ ಪಡೆದು ಮೀಟರ ಆಳವಡಿಸಬೇಕು ಎಂದು ತಿಳಿಸಿದರು.
ಯಾವುದೇ ಅವಘಡ ಸಂಭವಿಸಿದಂತೆ ಗುಣಮಟ್ಟದ ವಿದ್ಯುತ್ ವೈರ್ ಗಳನ್ನು ಬಳಕೆ ಮಾಡಬೇಕು. ಮಂಟಪದ ಸುತ್ತಮುತ್ತಲೂ ಬೆಳಕಿನ ವ್ಯವಸ್ಥೆ ಕಲ್ಪಿಸಬೆಕು. ಅಲ್ಲದೇ ಇಬ್ಬರು ವ್ಯಕ್ತಿಗಳು ಮಂಟಪದಲ್ಲಿ ಇರಬೇಕು. ನಿಗದಿ ಪಡಿಸಿದ ಧ್ವನಿವರ್ಧಕ ಬಳಕೆ ಮಾಡಿಕೊಳ್ಳಬೇಕು. ಕರ್ಕಶ ಶಬ್ದ ನಿಷೇಧಿಸಲಾಗಿದೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ಅಂತಹವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ’ ಅವರು ಎಚ್ಚರಿಸಿದರು.