ಒಂದೆಡೆ ಮುಡಾ ಹಗರಣ ಮುಂದಿಟ್ಟುಕೊಂಡು ಬಿಜೆಪಿವಯವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಕಸರತ್ತು ನಡೆಸುತ್ತಿದ್ದಾರೆ ಎಂಬ ಆರೋಪಗಳ ನಡುವೆಯೇ ಸದ್ದಿಲ್ಲದೆ ಆಪರೇಷನ್ ಕಮಲ ಕೂಡ ನಡೆಯುತ್ತಿದೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕರಾದ ಗಣಿಗ ರವಿ ಈ ರೀತಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದು, ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿಯವರು ಬರೋಬ್ಬರಿ 100 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಇಂದು ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ ಗಣಿಗ, ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಬಿ.ಎಲ್.ಸಂತೋಷ್ ಹಾಗೂ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವರು ನಮ್ಮ ಕಾಂಗ್ರೆಸ್ ಸರ್ಕಾರ ಬೀಳಿಸಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಕಲ್ಲುಬಂಡೆಯಂತೆ ಗಟ್ಟಿಯಾಗಿದೆ. ಅದನ್ನು ಅಲ್ಲಾಡಿಸಲು ಯಾರಿಂದಲೂ ಆಗುವುದಿಲ್ಲ. ಸಿದ್ದರಾಮಯ್ಯನವರು ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದು ಐದು ವರ್ಷವೂ ನಮ್ಮ ಸರ್ಕಾರ ಅಧಿಕಾರದಲ್ಲಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ನಮ್ಮ ಸರ್ಕಾರ ಬೀಳಿಸ್ತೀವಿ ಎಂದು ಐದು ಜನ ಪ್ರಾಮಿಸ್ ಮಾಡಿದ್ದಾರೆ. ಇದಕ್ಕಾಗಿ ಬಿಜೆಪಿಯ ಕೆಲ ಬ್ರೋಕರ್‌ಗಳು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುತ್ತಿದ್ದು, ನೂರಾರು ಕೋಟಿ ನೀಡುವ ಆಫರ್ ಮುಂದಿಡುತ್ತಿದ್ದಾರೆ. ಆದರೆ ಇದಕ್ಕೆ ನಮ್ಮ ಯಾವ ಶಾಸಕರು ಈ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದು ಹೇಳಿದ್ದಾರೆ.