Breaking News

ರಾಜ್ಯ ಸರ್ಕಾರದಿಂದ ಬ್ಲ್ಯಾಕ್‌ ಮೇಲ್‌ ತಂತ್ರ: ಪ್ರಲ್ಹಾದ ಜೋಶಿ

Spread the love

ಹುಬ್ಬಳ್ಳಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಹಳೆಯ ಪ್ರಕರಣವನ್ನು ಮುನ್ನೆಲೆಗೆ ತರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕೇಸ್ ಬಗ್ಗೆ ಮಾತನಾಡಿದರೆ, ನಿಮ್ಮ ಕೇಸ್ ಹೊರಗೆ ತರುತ್ತೇವೆ ಎಂಬ ಮನೋಭಾವ ಕಾಂಗ್ರೆಸ್‌ನದ್ದಾಗಿದೆ ಎಂದು ಹರಿಹಾಯ್ದರು.

 

ಕುಮಾರಸ್ವಾಮಿ ವಿರುದ್ಧ ಗಣಿ ಪರವಾನಿಗೆ ಪ್ರಕರಣ 2008ರದ್ದು. 2013ರಿಂದ 18ರ ವರೆಗೆ ಹಾಗೂ ಈಗ ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಆಗ ಕುಮಾರಸ್ವಾಮಿ ವಿರುದ್ಧ ಏಕೆ ತನಿಖೆ ಮಾಡಲಿಲ್ಲ. 2018-19 ರಲ್ಲಿ ಕುಮಾರಸ್ವಾಮಿ ಜೊತೆ ಕೈಜೋಡಿಸಿ ಮೈತ್ರಿ ಸರ್ಕಾರ ಮಾಡಿದ್ದರು. ಆಗ ಸುಮ್ಮನೆ ಇದ್ದಿದ್ದು ಯಾಕೆ? ತಮಗೆ ಬೇಕಾದಾಗ ಏನೇ ಆದರೂ ಸರಿ, ಬೇಡವಾದಾಗ ತಪ್ಪು ಎಂಬುದು ಯಾವ ನೀತಿ ಎಂದು ಪ್ರಶ್ನಿಸಿದರು.

ಸಾವಿರಾರು ಸೈಟ್ ಮತ್ತು ಸಾವಿರಾರು ಕೋಟಿ ಅವ್ಯವಹಾರ ಮುಡಾ ಪ್ರಕರಣದಲ್ಲಿ ನಡೆದಿದೆ. ಅದನ್ನು ಮುಚ್ಚಿಹಾಕಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ರಾಜ್ಯಪಾಲರ ಆದೇಶ ಪಾಲನೆ ಮಾಡುತ್ತಿಲ್ಲ. ನ್ಯಾಯಾಂಗ ತನಿಖೆ ಹಲ್ಲು ಕಿತ್ತ ಹಾವು. ಅದರ ವರದಿ ಸರ್ಕಾರ ಒಪ್ಪಬಹುದು ಬಿಡಬಹುದು. ಅವರದ್ದೆ ಕೆಂಪಣ್ಣ ಆಯೋಗ ನೀಡಿರುವ ವರದಿ ಈಗ ಎಲ್ಲಿದೆ. ಸಿದ್ದರಾಮಯ್ಯನವರೇ ನಿಮ್ಮ ಶ್ರೀಮತಿ ಅವರ ಕೈಯಿಂದ ನೀವು ಬರೆಸಿದ್ದ ಪತ್ರಕ್ಕೆ ವೈಟನರ್ ಹಚ್ಚಿದರವರು ಯಾರು? ಅದನ್ನು ಮೊದಲು ಹೇಳಿ ಎಂದು ಆಗ್ರಹಿಸಿದರು.

ಸಿಎಂ ಬಿಜೆಪಿಯ ಯಾವುದೇ ಭ್ರಷ್ಟಾಚಾರವನ್ನಾದರು ತನಿಖೆ ಮಾಡಲಿ. ಅವರು ಜಾತಿ ನೆರಳಿನಲ್ಲಿದ್ದಾರೆ. ಆದರೆ ರಾಜ್ಯಪಾಲರ ಜಾತಿ ಬಗ್ಗೆ ಮಾತನಾಡಿದರೆ ಮರುಪ್ರಶ್ನೆ ಮಾಡುತ್ತಾರೆ. ಅಂಬೇಡ್ಕರರಿಗೆ ಅಪಮಾನ ಮಾಡಿರುವ, ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಪಾರ್ಟಿಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಅಂಬೇಡ್ಕರ್ ಅವರ ಸಮಾಧಿಗೆ ಜಾಗ ಕೊಡಲಿಲ್ಲ, ಅವರನ್ನು ಚುನಾವಣೆಯಲ್ಲಿ ಸೋಲಿಸದವರಿಗೆ ಪ್ರಶಸ್ತಿ ನೀಡಿದ್ದು ಕಾಂಗ್ರೆಸ್. ದೇವರಾಜ್ ಅರಸ್‌ಗೆ ಅಪಮಾನ ಮಾಡಿದವರು ಕಾಂಗ್ರೆಸ್‌ನವರು. ಸಿದ್ದರಾಮಯ್ಯ ನಿಮ್ಮ ಬೆನ್ನು ಮೊದಲು ನೋಡಿಕೊಳ್ಳಿ. ನೀವು ಇರುವ ಪಕ್ಷ ದಲಿತರಿಗೆ ಎಷ್ಟು ಅಪಮಾನ ಮಾಡಿದೆ ಅಂತ ಎಂದರು.

ಕುಮಾರಸ್ವಾಮಿ ಅವರನ್ನು ಮುಗಿಸಿರುವ ಅನುಭವ ಕಾಂಗ್ರೆಸ್‌ಗಿದೆ. ಹೀಗಾಗಿ ಅವರನ್ನು ಮುಗಿಸುವ ಮಾತುಗಳನ್ನಾಡುತ್ತಿದ್ದಾರೆ ಎಂದು ಸಚಿವ ದಿನೇಶ ಗುಂಡೂರಾವ್ ಅವರು ಕುಮಾರಸ್ವಾಮಿ ಮುಗಿಸಲು ಬಿಜೆಪಿ ಹೊರಟಿದೆ ಎಂಬ ಹೇಳಿಕೆಗೆ ಟಾಂಗ್ ಕೊಟ್ಟರು.

ನಾವ್ಯಾಕೆ ಕುಮಾರಸ್ವಾಮಿ ಅವರನ್ನು ಮುಗಿಸೋಣ. ಈ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಧಿಕಾರದಿಂದ ಕೆಳಗಿಳಿಸಿದ್ದು ಕಾಂಗ್ರೆಸ್.‌ ಹೀಗಾಗಿ ಅವರನ್ನು ಮತ್ತು ಜೆಡಿಎಸ್ ಮುಗಿಸುವ ಮಾತುಗಳನ್ನಾಡುತ್ತಿದ್ದಾರೆ. ನಿಮಗೆ ಬೇಕಾದಾಗ ಒಂದು ರೀತಿ ಮಾತಾಡುತ್ತೀರಿ. ಬೇಡವಾದಾಗ ಮತ್ತೊಂದು ರೀತಿ ಮಾತಾಡುತ್ತೀರಿ. ಇದು ನಿಮ್ಮ ವರ್ತನೆ ಎಂದರು.


Spread the love

About Laxminews 24x7

Check Also

ಹುಬ್ಬಳ್ಳಿ: ಕಾಯಕಯೋಗಿ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Spread the love ಹುಬ್ಬಳ್ಳಿ: ತಾಲ್ಲೂಕಿನ ಮಂಟೂರು, ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಅಡವಿಸಿದ್ಧೇಶ್ವರ ಮಠ ಹಾಗೂ ಶಿವಮೊಗ್ಗ ಜಿಲ್ಲೆ ಬಳ್ಳಿಗಾವಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ