ಮನೆಯಲ್ಲಿ ಸಿಲಿಂಡರ್ ಸ್ಪೋಟ: ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ**
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಮನೆಯಲ್ಲಿ ಸಿಲಿಂಡರ್ ಸ್ಪೋಟ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದರೆ, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ದುರ್ದೈವಿ ಮಹಾರಾಷ್ಟ್ರದ ಬೀಡ್ ಮೂಲದ ಸೂರ್ಯಕಾಂತ ಸೆಳಕೆ (55) ಎಂಬ ಕೂಲಿ ಕಾರ್ಮಿಕರಾಗಿದ್ದು, ಸಿಲಿಂಡರ್ ಸ್ಪೋಟದ ತೀವ್ರತೆಗೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಮತ್ತೋರ್ವ ಕಾರ್ಮಿಕ ಜ್ಞಾನೋದಯಗೆ ಗಂಭೀರ ಗಾಯಗಳಾಗಿದ್ದು, ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಲಿಂಡರ್ ಸ್ಪೋಟದ ತೀವ್ರತೆ ಇಷ್ಟಾಗಿದ್ದು, ಪಕ್ಕದ ಮನೆಯ ಗೋಡೆ ಕುಸಿದು, ಆ ಮನೆಯಲ್ಲಿದ್ದ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.