ರಾಯಚೂರು: ಮಸ್ಕಿ ಉಪಚುನಾವಣೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ, ಆದರೆ ಕ್ಷೇತ್ರದಲ್ಲಿ ಸಂಭಾವ್ಯ ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರು ಚುನಾವಣೆಯ ತುಂಬು ಉತ್ಸಾಹದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಉಪಚುನಾವಣೆ ಜಿದ್ದಾಜಿದ್ದಿನ ಕಣವಾಗಿದ್ದು ಜೆಡಿಎಸ್ ಸದ್ಯಕ್ಕೆ ತಟಸ್ಥವಾಗಿದೆ. ಸಮಾವೇಶಗಳ ಮೂಲಕ ಕಾರ್ಯಕರ್ತರ ಸಂಘಟನೆಯ ಜೊತೆ ತಳಮಟ್ಟದಿಂದಲೂ ಪಕ್ಷ ಬಲಪಡಿಸಿಕೊಳ್ಳಲು ಕಾಂಗ್ರೆಸ್ ಬಿಜೆಪಿ ಮುಂದಾಗಿವೆ. ಕಳೆದ ಬಾರಿಯ ಚುನಾವಣೆಯಲ್ಲಿದ್ದ ಪ್ರಬಲ ಅಭ್ಯರ್ಥಿಗಳೇ ಈ ಬಾರಿಯೂ ಮುಖಾಮುಖಿಯಾಗುತ್ತಿದ್ದಾರೆ. ಆದರೆ ಪಕ್ಷಗಳು ಮಾತ್ರ ಅದಲು ಬದಲು ಆಗಿರುವುದರಿಂದ ಕಾರ್ಯಕರ್ತರು ಸಹ ಪಕ್ಷಗಳನ್ನು ಬದಲಿಸಿದ್ದಾರೆ.
ನವೆಂಬರ್ 7ರಂದು ಬೆಂಗಳೂರಲ್ಲಿ ಅನೌಪಚಾರಿಕವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಆರ್.ಬಸನಗೌಡ ತುರುವಿಹಾಳ ನವೆಂಬರ್ 23ರಂದು ಸುಮಾರು ಐದು ಸಾವಿರ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಪ್ರತಾಪ್ ಗೌಡರನ್ನು ಸೋಲಿಸಲು ಕಾಂಗ್ರೆಸ್‍ಗೆ ಬಂದಿರುವುದಾಗಿ ಹೇಳಿರುವ ಬಸನಗೌಡ ಬಿಜೆಪಿಯಲ್ಲಿ ನಮ್ಮ ಕಾರ್ಯಕರ್ತರಿಗೆ ಬೆಲೆಯಿಲ್ಲದ ಕಾರಣ ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ ಅಂತ ತಿಳಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಾಲಿಗೆ ನಮಸ್ಕರಿಸಿ, ಸಮಾವೇಶದಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬಸನಗೌಡ ತುರವಿಹಾಳ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.