ಬೆಂಗಳೂರು: ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೆಯೇ ಯಾಕೆ? ನನ್ನ ಮೇಲೆ ನಡೆಯುತ್ತಿರುವ ತನಿಖೆ ದ್ವೇಷದ ರಾಜಕಾರಣವಲ್ಲವೇ? ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ನನ್ನ ವಿರುದ್ಧ ತನಿಖೆ ಮಾಡುವಂತೆ ಸಿಬಿಐಗೆ ಅನುಮತಿ ನೀಡಿದ್ದಾರೆ. ಇದುವರೆಗೂ ಯಾರ ಮೇಲೆ ಈ ರೀತಿ ತನಿಖೆ ಮಾಡಿಸಿದ್ದಾರೆ? ರಾಜ್ಯದಲ್ಲಿ ನಾನೊಬ್ಬನೇ ಆಸ್ತಿ ಸಂಪಾದಿಸಿದ್ದೇನಾ? ನನ್ನ ಮೇಲೆ ಯಾವುದಾದರೂ ದೂರು ದಾಖಲಾಗಿದೆಯಾ? ಯಾವುದಾದರೂ ಆರೋಪ ಸಾಬೀತಾಗಿದೆಯಾ? ಯಾರ ಬಳಿಯಾದರೂ ನಾನು ಲಂಚ ಪಡೆದಿದ್ದೇನಾ? ಇದು ರಾಜಕೀಯ ದ್ವೇಶ ಅಲ್ಲವೇ? ‘ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಸಿಬಿಐ ವಿಚಾರಣೆ ನಡೆಸಲಾಗುತ್ತಿದೆ. ನಾನು ಮಾಡಬಾರದ ಕೆಲಸ ಮಾಡಿಲ್ಲ. ಹೀಗಾಗಿ ಹೆದರುವ ಅಗತ್ಯವಿಲ್ಲ. ನಾನು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.