ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಸ್ಥಾನ ಹೋಗುತ್ತದೆ ಎಂಬುದು ಗೊತ್ತಾದ ನಂತರ ಅದಕ್ಕೆ ಜಾತಿಯ ಲೇಪನ ಮಾಡುತ್ತಿದ್ಧಾರೆ’ ಎಂದು ಕೇಂದ್ರ ನಾಗರಿಕ ಸರಬರಾಜು ಮತ್ತು ಆಹಾರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ನಾಯಕನನ್ನು ತೆಗೆದು ಬೇರೆಯವರನ್ನು ಸಿ.ಎಂ ಮಾಡುವಂತೆ ನಾವು ಹೇಳಿಲ್ಲ.
ಸಿದ್ದರಾಮಯ್ಯ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ರಾಜೀನಾಮೆ ಕೊಡಬೇಕು ಎಂಬುದಷ್ಟೇ ನಮ್ಮ ಆಗ್ರಹ. ಹಿಂದುಳಿದ ವರ್ಗದ ಎಸ್.ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಅವಮಾನಿಸಿದ್ದು ಕಾಂಗ್ರೆಸ್ ಪಕ್ಷ’ ಎಂದು ದೂರಿದರು.
‘ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾದಲ್ಲಿ ಹಗರಣಗಳು ನಡೆದರೂ ಕಾಂಗ್ರೆಸ್‌ನವರು ಭಂಡತನದಿಂದ ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನೈತಿಕ ಹೊಣೆ ಹೊರುವುದು ಬಿಟ್ಟು, ಆಡಳಿತ ನಡೆಸುವವರೇ ಜನಾಂದೋಲನ ಮಾಡುತ್ತಿರುವುದು ಹಾಸ್ಯಾಸ್ಪದ. ಸರ್ಕಾರದಲ್ಲಿ ಇದ್ದವರು ಆಡಳಿತ ನಡೆಸಬೇಕು, ಹೋರಾಟ ಮಾಡುವುದು ವಿರೋಧ ಪಕ್ಷದ ಕೆಲಸ’ ಎಂದರು.