ನವಲಗುಂದ: ಈರುಳ್ಳಿ ಬಿತ್ತಿದ ರೈತರ ಮೊಗದಲ್ಲಿ ಈ ವರ್ಷ ಮಂದಹಾಸ ಮೂಡಿತ್ತು. ಬೆಳೆ ಚನ್ನಾಗಿ ಬರುತ್ತಿದೆ ಎಂದು ಯೋಜಿಸುತ್ತಿದ್ದರು. ಆ ವೇಳೆಗೆ ಮಳೆ ಸುರಿದ ಪರಿಣಾಮ ಈರುಳ್ಳಿ ಸಂಪೂರ್ಣವಾಗಿ ನೀರುಪಾಲಾಗಿದೆ. ಈರುಳ್ಳಿ ಬೆಳಿದಿದ್ದ ರೈತರು ಕಂಗಾಲಾಗಿದ್ದಾರೆ.
ಕಳೆದ ಗುರುವಾರ ಸುರಿದ ಮಳೆಗೆ ತಾಲ್ಲೂಕಿನ ಯಮನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಮಾರಗೊಪ್ಪ ಹದ್ದಿನಲ್ಲಿರುವ ರೈತನ ಹೊಲದ ಈರುಳ್ಳಿ ಬೆಳೆ ಹೊಲದಲ್ಲಿ ನೀರು ನಿಂತು ಅಪಾರ ಪ್ರಮಾಣದಲ್ಲಿ ಬೆಳೆಹಾನಿಗಿದೆ
ಬಿತ್ತಿದ ದುಬಾರಿ ಬೀಜ, ಬಿತ್ತನೆ ಖರ್ಚು, ಕಳೆ ತಗೆಸುವುದು, ಔಷಧಿ ಸಿಂಪಡಣೆ ಮಾಡುವುದು ಸೇರಿ ಎಕರೆಗೆ ಕನಿಷ್ಟ ₹ 25-30 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳೆ ಪ್ರತಿ ಕೆ.ಜಿ.ಗೆ ₹ 45 ರಿಂದ ₹ 55ನಂತೆ ಮಾರಾಟ ಮಾಡಲಾಗುತ್ತಿದೆ ಆದರೆ ಬಿತ್ತಿದ ಈರುಳ್ಳಿ ಬೆಳೆ ನೀರು ನಿಂತು ಕೊಳೆ ರೋಗ ಬಂದು ಬೆಳೆ ಕೈಗೆ ಬಾರದ ಪರಿಸ್ಥಿತಿ ಬಂದೊಗಿದೆ ಎಂದು ರೈತರು ಅಳಲು ತೋಡಿಕೊಂಡರು.
‘ಸಾಲ ಸೋಲ ಮಾಡಿ ಈರುಳ್ಳಿ ಬಿತ್ತಿದ ಬೆಳಗಾರರಿಗೆ ಮಳೆಯಿಂದ ನಷ್ಟ ಉಂಟಾಗಿದೆ. ಕಳೆದ ಕೆಲದಿನಗಳಿಂದ ಮಳೆ ಅಬ್ಬರಿಸಿದ್ದರಿಂದಾಗಿ ಈರುಳ್ಳಿ ಬೆಳೆ ಹಾಳಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ’ ಎಂದರು.
ಕಳೆದ ವರ್ಷವು ಬರಗಾಲಕ್ಕೆ ನಲುಗಿದ ರೈತರು ಮತ್ತೆ ಈ ವರ್ಷ ಅತೀ ಮಳೆಯಿಂದ ಗಾಯದ ಮೇಲೆ ಬರೆ ಎಳೆದಂತೆ ಮಳೆಯಿಂದ ಅಪಾರ ಪ್ರಮಾಣದ ಉಳ್ಳಾಗಡ್ಡಿ, ಹೆಸರು, ಉದ್ದು ಬೆಳೆಗಳಿಗೆ ಹಾನಿಯಾಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸರ್ಕಾರದಿಂದ ಬರುವ ಪರಿಹಾರ ಒದಗಿಸಬೇಕು ಎಂದು ರೈತ ಹೋರಾಟಗಾರ ಲೋಕನಾಥ್ ಹೇಬಸೂರ್ ಆಗ್ರಹಿಸಿದರು.