ಹುಬ್ಬಳ್ಳಿ: ರಾಜ್ಯದಲ್ಲಿ ಕಳೆದ ವರ್ಷ ದಾಖಲಾದ ಒಟ್ಟೂ ಕ್ಯಾನ್ಸರ್ ಪ್ರಕರಣಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಕರಣ ಶೇ 5.9 ರಷ್ಟಿದೆ ಎಂಬುದು ಕಿದ್ವಾಯಿ ಸ್ವಾರಕ ಗಂಥಿ ಸಂಸ್ಥೆಯ ಮಾಹಿತಿ. ಅಂತೆಯೇ ಧಾರವಾಡ ಜಿಲ್ಲೆಯಲ್ಲೂ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಏರುಗತಿಯಲ್ಲಿ ಸಾಗಿದೆ ಎಂಬುದನ್ನು ಕಿಮ್ಸ್‌ನ ಕ್ಯಾನ್ಸರ್ ಚಿಕಿತ್ಸಾ ವಿಭಾಗ ದೃಢೀಕರಿಸಿದೆ.
10 ವರ್ಷಗಳಲ್ಲಿ ಕಿಮ್ಸ್‌ನಲ್ಲಿ ದಾಖಲಾದ ಶ್ವಾಸಕೋಶ ಕ್ಯಾನ್ಸರ್ ರೋಗಿಗಳ ಅಂಕಿ-ಅಂಶ ಗಮನಿಸಿದರೆ, ಕೋವಿಡ್ ಅವಧಿಯಲ್ಲಿ ಹೆಚ್ಚು ರೋಗಿಗಳು ಚಿಕಿತ್ಸೆಗೆ ದಾಖಲಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಿದೆ. 2014 ರಿಂದ 2023ರ ಅವಧಿಯಲ್ಲಿ ಸರಾಸರಿ 55 ಪ್ರಕರಣಗಳು ದಾಖಲಾದರೆ, 2024ರ ಜುಲೈವರೆಗೆ ಏಳು ತಿಂಗಳಲ್ಲಿ 55 ಪ್ರಕರಣ ದಾಖಲಾಗಿದೆ.
‘ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಚಿಕಿತ್ಸೆಗಾಗಿ ಬರುವವರಲ್ಲಿ ಕಿಮ್ಸ್‌ನ ಕ್ಯಾನ್ಸರ್ ಚಿಕಿತ್ಸಾ ವಿಭಾಗಕ್ಕೆ ತಿಂಗಳಿಗೆ ಸರಾಸರಿ 4-5 ಹೊಸ ರೋಗಿಗಳಂತೆ ವರ್ಷಕ್ಕೆ 50-55 ಶ್ವಾಸಕೋಶ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಅವರಲ್ಲಿ ಶೇ 95ಕ್ಕೂ ಹೆಚ್ಚಿನ ರೋಗಿಗಳು ತಪಾಸಣೆಗೆ ಒಳಪಡುವಾಗ ನಾಲ್ಕನೇ ಹಂತದಲ್ಲಿರುತ್ತಾರೆ. ಈ ಹಂತದಲ್ಲಿ ಕ್ಯಾನ್ಸರ್ ಮೂಳೆ, ಮೆದುಳಲ್ಲೂ ಹರಡಿ ರೋಗಿ ಬದುಕುವ ಸಾಧ್ಯತೆ ಕ್ಷೀಣವಾಗಿರಲಿದೆ. ಶ್ವಾಸಕೋಶದ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಯಾಗುವುದು ತುಂಬಾ ವಿರಳ’ ಎಂದು ಕ್ಯಾನ್ಸರ್ ತಜ್ಞರು ಹೇಳುತ್ತಾರೆ.
‘ನಿರಂತರ ಕೆಮ್ಮು, ಕಫ, ಕಫದ ಜೊತೆ ರಕ್ತ, ಸುಸ್ತು, ಸ್ವಲ್ಪ ನಡೆದರೂ ಆಯಾಸ, ಉಸಿರಾಟದ ತೊಂದರೆ, ಉಬ್ಬಸ, ತೂಕ ಕಡಿಮೆ, ರಕ್ತ ವಾಂತಿ, ಧ್ವನಿಯಲ್ಲಿ ಒರಟುತನ ಮುಂತಾದವು ಶ್ವಾಸಕೋಶ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು. ಇದು ಎಲ್ಲವನ್ನೂ ನಿರ್ಲಕ್ಷಿಸಿ, ಯಾವಾಗ ಮೂಳೆ ನೋವು ಕಾಣಿಸಿಕೊಳ್ಳುವುದೋ, ಆಗ ರೋಗಿಗಳು ವೈದ್ಯರನ್ನು ಭೇಟಿ ಆಗುತ್ತಾರೆ. ಆಗ ರೋಗ 4ನೇ ಹಂತ ತಲುಪಿರುತ್ತದೆ’ ಎಂದು ಅವರು ಹೇಳುತ್ತಾರೆ.
‘ಶ್ವಾಸಕೋಶ ಕ್ಯಾನ್ಸರ್‌ಗೆ ನಿಖರ ಕಾರಣಗಳಿಲ್ಲದಿದ್ದರೂ ತಂಬಾಕು ಮತ್ತು ವಾಯುಮಾಲಿನ್ಯ ಪ್ರಮುಖವಾದವು. ಧೂಮಪಾನಿಗಳಿಗೆ ಶ್ವಾಸಕೋಶ ಕ್ಯಾನ್ಸರ್ ಹೆಚ್ಚು ಬಾಧಿಸುತ್ತದೆ. ಧೂಮಪಾನಿಗಳಲ್ಲದವರು ಧೂಮಪಾನಿಗಳ ಸಂಪರ್ಕದಲ್ಲಿ ಇರುವವರಿಗೂ, ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಕೈಗಾರಿಕೆಗಳು ಹಾಗೂ ವಾಹನಗಳ ಹೊಗೆ ಕೂಡ ಈ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಲ್ಲಿ ಒಂದು’ ಎಂದು ಕಿಮ್ಸ್‌ನ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಮೆಡಿಕಲ್ ಅಂಕೊಲಾಜಿಸ್ಟ್ ಡಾ.ವಿಶಾಲ್ ಕುಲಕರ್ಣಿತಿಳಿಸಿದರು.
‘ಧೂಮಪಾನ ಮತ್ತು ವಾಯುಮಾಲಿನ್ಯ ನಿಯಂತ್ರಣದಿಂದ ಶ್ವಾಶಕೋಶ ಕ್ಯಾನ್ಸರ್ ತಡೆಯಬೇಕಿದೆ. ಹೊಗೆ ಉಗುಳುವ ವಾಹನಗಳಿಗೆ ನಿರ್ಬಂಧಿಸಿ, ಸಿಎನ್‌ಜಿ, ಎಲೆಕ್ಟ್ರಿಕ್ ಚಾಲಿತ ವಾಹನಗಳ ಬಳಕೆಗೆ ಅದ್ಯತೆ ನೀಡಬೇಕಿದೆ. ವೈಯಕ್ತಿಕ ವಾಹನಗಳ ಬದಲು ಸಾರ್ವಜನಿಕ ವಾಹನಗಳನ್ನು ಹೆಚ್ಚು ಬಳಸಬೇಕು’ ಎಂಬುದು ಅವರ ಸಲಹೆ.
ಶ್ವಾಸಕೋಶ ಕ್ಯಾನ್ಸರ್‌ನ 4 ಹಂತಗಳು:
ಶ್ವಾಸಕೋಶದ ಕ್ಯಾನ್ಸರ್‌ನ್ನು ನಾಲ್ಕು ಹಂತಗಳಲ್ಲಿ ಗಮನಿಸಬಹುದು. ಮೊದಲ ಹಂತದಲ್ಲಿ ಶ್ವಾಸಕೋಶದಿಂದ ಹೊರಗೆ ಹರಡಿರುವುದಿಲ್ಲ. ಎರಡನೇ ಹಂತದಲ್ಲಿ ಶ್ವಾಸಕೋಶದಲ್ಲಿ ಒಂದಕ್ಕಿಂತ ಹೆಚ್ಚು ಗೆಡ್ಡೆಗಳು ಕಾಣಿಸಿಕೊಳ್ಳುತ್ತವೆ. ಶ್ವಾಸಕೋಶದ ಒಂದೇ ಹಾಲೆಯಲ್ಲಿ ಗೆಡ್ಡೆಗಳು ಕಾಣಿಸುತ್ತವೆ. ಮೂರನೇ ಹಂತದಲ್ಲಿ ವಿವಿಧ ಹಾಲೆಗಳಲ್ಲಿ ಗೆಡ್ಡೆಗಳು ಕಾಣಿಸಿಕೊಳ್ಳುತ್ತದೆ. ನಾಲ್ಕನೇ ಹಂತದಲ್ಲಿ ಶ್ವಾಸಕೋಶ ಅಲ್ಲದೆ ದೇಹದ ವಿವಿಧ ಅಂಗಗಳಿಗೆ ಹರಡುತ್ತದೆ.