ಚಿಕ್ಕೋಡಿ: ತಾಲ್ಲೂಕಿನ ಕೇರೂರು ಗ್ರಾಮದಲ್ಲಿ 15-20 ಜನ ಯುವಕ-ಯುವತಿಯರ ಗುಂಪು ಸೇರಿ ಸ್ಥಾಪಿಸಿದ ಉಚಿತ ಗ್ರಂಥಾಲಯ ಹಲವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಗೊಳ್ಳಲು ಸಹಕಾರಿಯಾಗಿದೆ.
ಕಳೆದ 6 ವರ್ಷಗಳ ಹಿಂದೆ ಸ್ಥಾಪಿಸಿದ ಉಚಿತ ಗ್ರಂಥಾಲಯ ಸೇವೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅನುಕೂಲವಾಗುತ್ತಿದೆ.
ಪ್ರತಿ ದಿನವೂ ಗ್ರಂಥಾಲಯದಲ್ಲಿ ಓದಬಹುದು. ಮನೆಗೆ ಪುಸ್ತಕಗಳನ್ನು ಎರವಲು ಪಡೆದು ಓದಬಹುದಾಗಿದೆ. ಆದರೆ ಎಲ್ಲವೂ ಇಲ್ಲಿ ಉಚಿತ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಬೇಕೆಂಬ ಕಾರಣದಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅನುಕೂಲವಾಗುವ ದೃಷ್ಠಿಯಿಂದ ‘ನಿರ್ಮಾಣ’ ಎಂಬ ಹೆಸರಿನಲ್ಲಿ 2019ರಲ್ಲಿ ಯುವಕ ರವಿ ಪಾಟೀಲ ಎಂಬುವವರ ನೇತೃತ್ವದಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ.
ಸಿದ್ದು ನಾವಿ, ವಿಠ್ಠಲ ಕೇಸ್ತಿ, ಡಿ.ಎ.ನದಾಫ್, ರಾಜು ಮಾಳಿ, ಜಯಶ್ರೀ ಶೆಟ್ಟಿ, ರೇಖಾ ಆಲಗೂರೆ, ಮಾಧುರಿ ಸಿಂಧೆ, ತಮ್ಮಣ್ಣ ಗಡದೆ, ಜನಾರ್ಧನ ಸಾಳುಂಕೆ ಎಂಬ ಯುವಕ-ಯುವತಿಯರೆಲ್ಲರೂ ‘ನಿರ್ಮಾಣ’ ಗ್ರಂಥಾಲಯ ಪ್ರಾರಂಭಕ್ಕೆ ಕಾರಣರಾದವರು.