ಗೋಕಾಕ: ಇಲ್ಲಿನ ಹಳೆ ದನಗಳ ಪೇಟೆ, ದಾಳಂಬ್ರಿ ತೋಟ, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗರ ಓಣಿ, ಕುಂಬಾರ ಓಣಿ, ಡೋರ ಗಲ್ಲಿ ಮುಂತಾದ ಪ್ರದೇಶಗಳ ಪ್ರತಿ ವರ್ಷ ಘಟಪ್ರಭೆ ಪ್ರವಾಹದಲ್ಲಿ ಮುಳುಗುತ್ತವೆ. ಮಹರ್ಷಿ ಭಗಿರಥ ಸರ್ಕಲ್ ಅಂತೂ ಮೊದಲ ಮಳೆಗೇ ಜಲಾವೃತವಾಗುತ್ತದೆ.
ಮೂರು ತಲೆಮಾರುಗಳಿಂದಲೂ ಜನ ಒಂದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ನೆರೆ ಬಂದಾಗ ಜನಜೀವನ ಮಾತ್ರ ಅಸ್ತವ್ಯಸ್ತ ಆಗುವುದಿಲ್ಲ. ಇಲ್ಲಿನ ಶಾಲೆ- ಕಾಲೇಜು ಮಕ್ಕಳ ಶಿಕ್ಷಣದ ಮೇಲೂ ಪೆಟ್ಟು ಬೀಳುತ್ತದೆ.
ಪ್ರವಾಹದಿಂದ ಸಮಸ್ಯೆ ಎದುರಿಸುತ್ತಿರುವ 160ಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯಕ್ಕೆ ನೀರು ಕೆಳಗೆ ಇಳಿದಿದ್ದು ಅವರನ್ನು ಮರಳಿ ಮನೆಗೆ ಕಳುಹಿಸಲಾಗಿದೆ. ಆದರೆ, ನೀರು ಇರುವವರೆಗೆ ಅಂದರೆ 18 ದಿನಗಳ ಕಾಲ ಶಾಲೆಗೆ ಹೋಗಲು ಆಗದೇ ಮತ್ತು ಮನೆಪಾಠವನ್ನು ಮಾಡಿಕೊಳ್ಳಲು ಆಗದೇ ಪರಿತಪಿಸುವಂತಾಯಿತು ಎಂಬುದು ಅವರ ನೋವು.
ಗೋಕಾಕನ ಸರ್ಕಾರಿ ಮುನ್ಸಿಪಲ್ ಪದವಿ ಕಾಲೇಜಿನಲ್ಲಿ 6 ವಿದ್ಯಾರ್ಥಿಗಳು ಇದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ (ಆ. 5) ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಸಂಕಷ್ಟ ಹೇಳಿಕೊಳ್ಳಲು ಆಗಲಿಲ್ಲ.
‘ಗೋಕಾಕದ ದಾಳಿಂಬ್ರೆ ತೋಟದ ಮಜಗಾರ ಓಣಿಯಲ್ಲಿ ನಾವು ವಾಸವಾಗಿದ್ದೇವೆ. ಪ್ರತಿ ವರ್ಷವೂ ಘಟಪ್ರಭಾ ನೀರು ಮನೆಗೆ ನುಗ್ಗಿ, ಮಳೆಗಾಲದ ಎರಡು ತಿಂಗಳು ತರಗತಿಗಳು ತಪ್ಪುತ್ತವೆ. ಈ ವರ್ಷ ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕು. ಮನೆ ಮುಳುಗಿದ್ದರಿಂದ ಕಾಳಜಿ ಕೇಂದ್ರದಲ್ಲಿರುವೆ. ಓದಲು, ಬರೆಯಲು ಆಗುತ್ತಿಲ್ಲ. ನಾನು ಓದಿನಲ್ಲಿ ಹಿಂದುಳಿದಿರುವೆ ಎಂಬ ಚಿಂತೆ ಕಾಡುತ್ತಿದೆ’ ಎಂದು ವಿದ್ಯಾಶ್ರೀ ದಿಲೀಪ ಕದಮ್ ತಿಳಿಸಿದರು.