ಸಂಕೇಶ್ವರ: ಪಟ್ಟಣದ ದುರದುಂಡೀಶ್ವರ ಸಗಟು ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಮುಂದಿನ ಸಭೆಯವರೆಗೂ ಈಗಿರುವ ಸೇವಾ ಶುಲ್ಕವನ್ನು ರದ್ದು ಮಾಡಲಾಗಿದೆ ಎಂದು ತಹಶೀಲ್ದಾರ್ ಮಂಜುಳಾ ನಾಯಿಕ ಹೇಳಿದರು.
ಪಟ್ಟಣದ ಸಗಟು ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಮುಖಂಡರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಮಾತನಾಡಿದ ಅವರು, ಕಾಯಿಪಲ್ಲೆ ಮಾರುಕಟ್ಟೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಿದ್ದು, ರೈತರು ಹಾಗೂ ಮಾರುಕಟ್ಟೆ ಸಮಿತಿಯೊಂದಿಗೆ ಶೀಘ್ರದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಮುಂಬರುವ ಸಂಧಾನಸಭೆ ವರೆಗೂ ಸೇವಾ ಶುಲ್ಕ ಹಾಗೂ ಇತರ ಶುಲ್ಕವನ್ನು ಪಡೆಯುವಂತಿಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಚ ಚೂನ್ನಪ್ಪಾ ಪೂಜಾರಿ ಮಾತನಾಡಿ, ಮಾರುಕಟ್ಟೆ ಸಮಿತಿಯಲ್ಲಿ ದಲ್ಲಾಳಿಗಳು ನಾನಾ ರೀತಿ ಮೋಸಗಳನ್ನು ಮಾಡುತ್ತಿದ್ದು, ತೂಕದಲ್ಲಿ ವ್ಯತ್ಯಾಸ, ದರ ಕಡಿತ, ಹೆಚ್ಚುವರಿ ಸೇವಾಶುಲ್ಕ, ಸಮಯಕ್ಕೆ ಸರಿಯಾಗಿ ಹಣಪಾವತಿಸದೇ ಇರುವುದು, ದಲ್ಲಾಳಿಗಳ ದುರ್ವರ್ತನೆ ಹೀಗೆ ಹಲವು ಸಮಸ್ಯೆಗಳಿವೆ ಎಂದರು.
ಪುರಸಭೆ ಸದಸ್ಯ ಸುನೀಲ ಪರ್ವತರಾವ ಮಾತನಾಡಿ, ನಿಡಸೋಸಿ ಶ್ರೀಮಠವೂ ಯಾವತ್ತೂ ರೈತರ ಪರವಾಗಿದ್ದು ಮಾರುಕಟ್ಟೆಯಲ್ಲಿ ಆಗಿರುವ ಸಮಸ್ಯೆಯನ್ನು ಸರಿಪಡಿಸಲಾಗುವುದು. ಈ ನಿಟ್ಟಿನಲ್ಲಿ ನಿಡಸೋಸಿ ಶ್ರೀಗಳು ಹಾಗೂ ಶಾಸಕ ನಿಖಿಲ್ ಕತ್ತಿ ಉಪಸ್ಥಿತಿಯಲ್ಲಿ ರೈತರ ಹಿತಾಸಕ್ತಿಯನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಮಾರುಕಟ್ಟೆ ಸಮಿತಿ ಉಸ್ತುವಾರಿ ದಸ್ತಗಿರ ತೇರಣಿ, ಈಗಾಗಲೇ ಆಗಿರುವ ಪ್ರಮಾದಕ್ಕೆ ಕ್ಷಮೆ ಕೇಳುವುದಾಗಿ ಹೇಳಿದರು.