ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆಯಲ್ಲಿ ಅಕ್ರಮ
ಬಾಗಲಕೋಟೆ: ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಹಣ ಅಕ್ರಮವಾಗಿ ಅನ್ಯ ಖಾತೆಗಳಿಗೆ ವರ್ಗಾವಣೆಯಾಗಿ ರುವ ನಡುವೆಯೇ ಬಾಗಲಕೋಟೆಯ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಲ್ಲೂ ಅಂತಹದ್ದೇ ಹಗರಣ ಪತ್ತೆಯಾಗಿದೆ. ಸಮಿತಿಯ 3 ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 2.47 ಕೋಟಿ ರೂ.
ಅನ್ಯರ ಖಾತೆಗೆ ವರ್ಗವಾಗಿದೆ. 4 ವರ್ಷಗಳಲ್ಲಿ 54 ಬಾರಿ ಹಣ ವರ್ಗಾವಣೆಯಾಗಿದೆ ಎಂಬ ಸಂಗತಿ ಬಯಲಾಗಿದೆ. ಇದಕ್ಕೆ ಸ್ಥಳೀಯ ನಿರ್ಮಿತಿ ಕೇಂದ್ರವೇ ಕಾರಣ ಎನ್ನಲಾಗಿದೆ.
ನಗರದ ಐಡಿಬಿಐ ಬ್ಯಾಂಕ್‌ನಲ್ಲಿ ಜಿಲ್ಲಾಧಿಕಾರಿಗಳು, ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿ ಒಟ್ಟು 3 ಖಾತೆಗಳಿವೆ. ಇಲಾಖೆಯ ವಿವಿಧ ಅಭಿವೃದ್ಧಿ ಕಾರ್ಯ ಕ್ರಮ, ಫಲಾನುಭವಿಗಳಿಗೆ ಸಹಾಯಧನ ವಿತರಣೆ ಸೇರಿ ವಿವಿಧ ಯೋಜನೆಗಳಿಗೆ ವ್ಯಯಿಸಲು ಈ ಮೂರು ಖಾತೆಗಳಲ್ಲಿ 2,47,73,999 ರೂ. ಹಣವಿತ್ತು. ಆ ಮೊತ್ತ 2021ರ ಅ. 28ರಿಂದ 2024ರ ಫೆ. 22ರ ಅವಧಿಯಲ್ಲಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಗೊಂಡಿದೆ.
54 ಬಾರಿ ಹಣ ವರ್ಗ
ಈ ಹಗರಣದ ಕುರಿತು ಬಾಗಲ ಕೋಟೆಯ ಸೆನ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಾಥಮಿಕ ತನಿಖೆಯ ಬಳಿಕ ಮೂರು ಖಾತೆಗಳಿಂದ ಒಟ್ಟು 54 ಬಾರಿ ಹಣ ವರ್ಗಾವಣೆಯಾಗಿರುವುದು ಖಚಿತ ವಾಗಿದೆ. ಒಂದು ಖಾತೆಯಿಂದ 28 ಬಾರಿ, ಮತ್ತೂಂದು ಖಾತೆಯಿಂದ 25 ಬಾರಿ ಹಾಗೂ ಇನ್ನೊಂದು ಖಾತೆಯಿಂದ ಒಮ್ಮೆ ಹಣ ವರ್ಗವಾಗಿದೆ. ಮುಖ್ಯವಾಗಿ ಪ್ರವಾಸೋದ್ಯಮ ಸಮಿತಿಯ ಖಾತೆಯಿಂದ ಸಮಾಜ ಕಲ್ಯಾಣ ಇಲಾಖೆಗೆ, ಅಲ್ಲಿಂದ ಬಾಗಲಕೋಟೆಯ ನಿರ್ಮಿತಿ ಕೇಂದ್ರದ ಖಾತೆಗೆ ಒಮ್ಮೆ 50 ಲಕ್ಷ ರೂ. ವರ್ಗಾವಣೆಯಾಗಿದೆ. ಹೀಗಾಗಿ ಈ ಹಗರಣದಲ್ಲಿ ನಿರ್ಮಿತಿ ಕೇಂದ್ರದ ಪಾಲೂ ಇರಬಹುದು ಎಂದು ಶಂಕಿಸಲಾಗಿದೆ.