ಕೊಪ್ಪಳ: ‘ಅಧಿಕಾರಿಗಳ ವರ್ಗಾವಣೆ ಎಂಬುದು ಎಲ್ಲ ಸರ್ಕಾರಗಳಲ್ಲಿಯೂ ದಂಧೆಯೇ ಆಗಿದೆ’ ಎಂದು ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಜಿಲ್ಲೆಯ ಕುಕನೂರು ತಾಲ್ಲೂಕಿನ ಕೋಮಲಾಪುರ ಗ್ರಾಮದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಧಿಕಾರಿಗಳು ತಮ್ಮ ವರ್ಗಾವಣೆಗೆ ಶಾಸಕರು, ಸಚಿವರ ಮೊರೆ ಹೋಗುತ್ತಿದ್ದು, ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಈ ದಂಧೆ ನಡೆಯುತ್ತಿದೆ’ ಎಂದರು.

‘ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲೆಯಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ ವರ್ಗಾವಣೆಯೂ ದಂಧೆಯಾಗಿದೆ. ಹಿಂದಿನ ಸರ್ಕಾರದಲ್ಲಿಯೂ ಇದೇ ಸಮಸ್ಯೆ ಇತ್ತು. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಗಾವಣೆ ದಂಧೆಗೆ ಕಡಿವಾಣ ಹಾಕಲು ಕ್ರಮ ವಹಿಸುವುದಾಗಿ ಹೇಳಿದ್ದಾರೆ’ ಎಂದು ಹೇಳಿದರು.
ಕೊಪ್ಪಳ ಎಸ್.ಪಿ. ಆಗಿದ್ದ ಯಶೋಧಾ ವಂಟಗೋಡಿ ಅವರನ್ನು ಕರ್ನಾಟಕ ಲೋಕಾಯುಕ್ತದ ಎಸ್.ಪಿ. ಆಗಿ ಇತ್ತೀಚೆಗೆ ವರ್ಗಾವಣೆ ಮಾಡಲಾಗಿದ್ದು, ಇದನ್ನು ರದ್ದುಪಡಿಸುವಂತೆ ರಾಯರಡ್ಡಿ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ರಾಯರಡ್ಡಿ, ‘ಶಾಸಕರ ಕೋರಿಕೆಯಂತೆ ಸಿ.ಎಂ. ಬಳಿ ಮನವಿ ಮಾಡಿದ್ದೆ. ಎಸ್.ಪಿ.ಯಾಗಿ ಯಾರೇ ಬಂದರೂ ನನಗೇನೂ ಸಮಸ್ಯೆಯಿಲ್ಲ’ ಎಂದರು.
Laxmi News 24×7