ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಬುಧವಾರ ಕಾರ್ಯಾಚರಣೆ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು 12 ನಕಲಿ ವೈದ್ಯರ ಚಿಕಿತ್ಸಾ ಕೇಂದ್ರಗಳಿಗೆ ಬೀಗ ಜಡಿದಿದ್ದಾರೆ.
‘ಮುಧೋಳ ತಾಲ್ಲೂಕಿನ ಬೆಳಗಲಿ, ಮಹಾಲಿಂಗಪುರ, ತೇರದಾಳದ ಎರಡು ಚಿಕಿತ್ಸಾ ಕೇಂದ್ರ, ಬೀಳಗಿ ತಾಲ್ಲೂಕಿನ ಮೂರು, ಬಾದಾಮಿ ತಾಲ್ಲೂಕಿನ ಒಂದು, ಬಾಗಲಕೋಟೆಯಲ್ಲಿ ಎರಡು, ಹುನಗುಂದ ಎರಡು ಚಿಕಿತ್ಸಾ ಕೇಂದ್ರ ಬಂದ್ ಮಾಡಲಾಗಿದೆ.
ಒಟ್ಟು 32 ಕಡೆ ಕಾರ್ಯಾಚರಣೆ ನಡೆಸಲಾಯಿತು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ ‘ ತಿಳಿಸಿದರು.
‘ಕಾರ್ಯಾಚರಣೆ ವೇಳೆ ಬಹುತೇಕ ಮಂದಿ ವೈದ್ಯಕೀಯ ಪದವಿ ಪಡೆಯದಿರುವುದು, ಎಸ್‌ಎಸ್‌ಎಲ್‌ಸಿ, ಪಿಯುಸಿ ಉತ್ತೀರ್ಣರಾದವರು ಮತ್ತು ಪ್ರಯೋಗಾಲಯದ ಸಿಬ್ಬಂದಿ ಚಿಕಿತ್ಸೆ ಕೊಡುತ್ತಿರುವುದು ಗೊತ್ತಾಯಿತು. ಕೆಲ ಕಡೆ ವಿರೋಧ ವ್ಯಕ್ತವಾದರೆ, ಇನ್ನೂ ಕೆಲ ಕಡೆ ಆಯುರ್ವೇದ ವೈದ್ಯರು ಅಲೋಪಥಿ ಚಿಕಿತ್ಸೆ ಕೊಡುತ್ತಿರುವುದು ಪತ್ತೆ ಆಯಿತು. ಅವರಿಗೆ ನೋಟಿಸ್ ನೀಡಿ, ಆಯುರ್ವೇದ ಚಿಕಿತ್ಸೆ ಕೊಡಲು ಸೂಚಿಸಲಾಯಿತು’ ಎಂದು ಅವರು ತಿಳಿಸಿದರು.
‘ಎಸ್‌ಎಸ್‌ಎಲ್‌ಸಿ ಪಾಸಾದವರೂ ವೈದ್ಯರು!’ ಎಂಬ ವಿಶೇಷ ವರದಿ ಜುಲೈ 6ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ಪ್ರಕಟವಾಗಿತ್ತು.