Breaking News

ಹುಬ್ಬಳ್ಳಿ | ನಗರಲ್ಲೊಂದು ಹಳ್ಳಿ ಸೊಗಡು

Spread the love

ಹುಬ್ಬಳ್ಳಿ: ನೋಡಲಷ್ಟೇ ಪುಟ್ಟ ಪುಟ್ಟ ಮನೆಗಳು. ಒಳ ಪ್ರವೇಶಿಸಿದರೆ ವಿಶಾಲ ಪಡಶಾಲೆ, ಅದಕ್ಕೆ ಹೊಂದಿಕೊಂಡು ಅಷ್ಟೇ ದೊಡ್ಡ ಕೊಟ್ಟಿಗೆಗಳು. ನೂರಾರು ದನ-ಕರುಗಳ ಜೊತೆಗೆ, ಆಡು-ಮೇಕೆಗಳ ಸಹ ಜೀವನ…

ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಗೋಪನಕೊಪ್ಪ ಗ್ರಾಮದ ಸಿದ್ದರಾಮೇಶ್ವರ ಬಡಾವಣೆಯ ಹಳ್ಳಿ ಸೊಗಡು.

ಹೇಳಿಕೊಳ್ಳಲಷ್ಟೇ ಕಂದಾಯ ಗ್ರಾಮವಾಗಿ, ನಗರ ಪ್ರದೇಶ ಎಂದು ಗುರುತಿಸಿಕೊಂಡಿದೆ. ಆದರೆ, ಜನರ ಜೀವನಶೈಲಿ, ಆಚಾರ-ವಿಚಾರಗಳೆಲ್ಲ ಈಗಲೂ ಪುಟ್ಟ ಗ್ರಾಮೀಣ ಪ್ರದೇಶದಂತಿದೆ.

ಮನೆ ಎದುರಿಗೆ ಇರುವ ಕಾಂಕ್ರಿಟ್‌ ರಸ್ತೆಯೇ ಅವರಿಗೆ ಮನೆಯಂಗಳ. ನಸುಕಿನ ಜಾವ ಎದ್ದು ರಸ್ತೆ ಶುಚಿಗೊಳಿಸಿ, ರಂಗೋಲಿ ಇಡುವುದು ಮಹಿಳೆಯರ ಕೆಲಸವಾದರೆ, ಬೆಳಕು ಮೂಡುತ್ತಿದ್ದಂತೆ ಕೊಟ್ಟಿಗೆ ಶುಚಿಗೊಳಿಸಿ, ದನ-ಕರುಗಳನ್ನು ರಸ್ತೆಗೆ ತಂದು ಸ್ನಾನ ಮಾಡಿಸಿ, ಹಾಲು ಹಿಂಡುವುದು ಪುರುಷರ ಕಾಯಕ. ಇಲ್ಲಿ ವಾಸಿಸುವ ಜನರು ಬಹುತೇಕರು ಕುರುಬರಾಗಿದ್ದು, ಮೂರು-ನಾಲ್ಕು ತಲೆಮಾರುಗಳಿಂದ ಹೈನುಗಾರಿಕೆಯೇ ಮುಖ್ಯ ಉದ್ಯೋಗ.

ಬಡಾವಣೆಯಲ್ಲಿ 50 ರಿಂದ 60 ಕುಟುಂಬಗಳಿದ್ದು, 300ಕ್ಕೂ ಹೆಚ್ಚು ದನ-ಕರುಗಳು ಇವೆ. ಸಾವಿರಕ್ಕೂ ಹೆಚ್ಚು ಆಡು-ಮೇಕೆಗಳಿವೆ. ದನ-ಕರುಗಳ ಸಂಖ್ಯೆ ಹೆಚ್ಚಿರುವುದರಿಂದ ಸುತ್ತಲಿನ ಕೆಲ ಬಡಾವಣೆ ಜನರಿಗೆ ಬೇಸವಿದೆ. ಅಶುಚಿತ್ವದಿಂದ ಸೊಳ್ಳೆಗಳು ಹೆಚ್ಚುತ್ತಿದ್ದು ಅನಾರೋಗ್ಯದ ಭಯ ಅವರನ್ನು ಕಾಡುತ್ತಿದೆ. ಪಾಲಿಕೆ ಸಿಬ್ಬಂದಿ ಆಗಾಗ ಬಂದು, ಸುತ್ತಲಿನ ವಾತಾವರಣ ಶುಚಿಯಾಗಿ ಇಟ್ಟುಕೊಳ್ಳುವಂತೆ ಸ್ಥಳೀಯರಿಗೆ ಸೂಚಿಸುತ್ತಾರೆ.

‘ಯಾವ ಮೂಲ ಸೌಲಭ್ಯಗಳೂ ಇಲ್ಲದ ಈ ಬಡಾವಣೆ, ಕೆಲ ವರ್ಷಗಳಿಂದಷ್ಟೇ ಸೌಲಭ್ಯ ಪಡೆಯುತ್ತಿದೆ. ಕಚ್ಚಾ ರಸ್ತೆಗಳೆಲ್ಲ ಕಾಂಕ್ರಿಟ್‌ ರಸ್ತೆಗಳಾಗಿವೆ. ಮನೆ ಎದುರಿಗೆ ಹರಿಯುತ್ತಿದ್ದ ಕೊಳಚೆ ನೀರು ಹರಿಯಲು ಗಟಾರು, ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಗಟಾರದ ಹೂಳೆತ್ತ ಪರಿಣಾಮ, ಮಳೆ ಜೋರಾಗಿ ಬಂದರೆ ಗಟಾರ ತುಂಬಿ ನೀರು ರಸ್ತೆ ಮೇಲೆ ಹರಿದು, ಮನೆ ಒಳಗೂ ನುಗ್ಗುತ್ತದೆ. ದಿನದ 24 ಗಂಟೆಯೂ ಕುಡಿಯುವ ನೀರಿನ ಸೌಲಭ್ಯವಿದೆ. ಮನೆಗಳ ಮಧ್ಯ ಅಲ್ಲಲ್ಲಿ ಖಾಲಿ ನಿವೇಶನಗಳಿರುವುದರಿಂದ, ನೀರು ನಿಂತು ಕೊಳಚೆ ಪ್ರದೇಶವಾಗಿದೆ. ಡೆಂಗಿ ಜ್ವರದ ಭೀತಿ ಕಾಡುತ್ತಿದೆ’ ಎಂದು ನಿವಾಸಿಗಳು ತಿಳಿಸಿದರು.

‘ಮೂರು-ನಾಲ್ಕು ತಲೆಮಾರುಗಳಿಂದ ಇಲ್ಲಿಯೇ ವಾಸವಿದ್ದೇವೆ. ಯಾವ ಸೌಲಭ್ಯವೂ ಇಲ್ಲದ ಗ್ರಾಮ ಇದಾಗಿತ್ತು. ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ನಂತರ, ಮೂಲ ಸೌಲಭ್ಯಗಳು ದೊರಕಿವೆ. ಬಡಾವಣೆಯ ಅಲ್ಲಲ್ಲಿ ಹಾಗೂ ಅಕ್ಕಪಕ್ಕ ದೊಡ್ಡ ಕಟ್ಟಡಗಳು ತಲೆ ಎತ್ತಿದ್ದು, ಕೆಲವರು ಅಲ್ಲಿ ಬಾಡಿಗೆಗೆ ಬಂದಿದ್ದಾರೆ. ಅವರಿಗೆ ನಮ್ಮ ಹಳ್ಳಿ ಜೀವನ ಶೈಲಿ ಸರಿ ಹೊಂದುವುದಿಲ್ಲ. ಸಗಣಿ ಅವರಿಗೆ ಹೊಲಸು ವಾಸನೆಯಂತೆ. ನಮಗೆ ಅದು ಆರೋಗ್ಯದ ಸಂಪತ್ತು. ಇದರಿಂದ ಆಗಾಗ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತ ಇರುತ್ತದೆ’ ಎಂದು ಸ್ಥಳೀಯ ನಿವಾಸಿ ದ್ಯಾಮಣ್ಣ ಜಟ್ಟಪ್ಪನವರ ಗೆ ತಿಳಿಸಿದರು.


Spread the love

About Laxminews 24x7

Check Also

ಕಾಂಗ್ರೆಸ್ ಸರ್ಕಾರ ಪತನ: ಭವಿಷ್ಯ ನುಡಿದ ಜಗದೀಶ್‌ ಶೆಟ್ಟರ್

Spread the love ಹುಬ್ಬಳ್ಳಿ, ಸೆಪ್ಟೆಂಬರ್‌ 11: ಕಾಂಗ್ರೆಸ್ ನಲ್ಲಿನ ಆಂತರಿಕ ವಿಚಾರ ದೊಡ್ಡ ಪ್ರಮಾಣದಲ್ಲಿ ಇದೆ. ಅದು ಬಹಿರಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ