ಶಿವಮೊಗ್ಗ, ಜುಲೈ 06: ಶಿವಮೊಗ್ಗ ಜಿಲ್ಲೆಯಲ್ಲಿ ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದೆ. ಹಳ್ಳಕೊಳ್ಳಗಳು ಭರ್ತಿಯಾಗಿದ್ದು, ತುಂಗಾ, ಶರಾವತಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಮಳೆಯಲ್ಲಿ ಮಲೆನಾಡಿನ ಅಂದವನ್ನು ಸವಿಯಲು ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಎರಡು ವಾರಗಳಿಂದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ವಿಶ್ವವಿಖ್ಯಾತ ಜೋಗ ಜಲಪಾತ ಜೀವಕಳೆ ಪಡೆದುಕೊಂಡಿದೆ. ಧುಮ್ಮಿಕ್ಕುತ್ತಿರುವ ಜೋಗ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ.
ಜೋಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಮಳೆಗಾಲದಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಜೋಗ ಜಲಪಾತ ವೀಕ್ಷಣೆಗೆ ಪ್ರತಿದಿನ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.
ಮಳೆ ಜೋರಾಗಿ ಸುರಿಯುತ್ತಿದ್ದು, ಜೋಗ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಭಾರೀ ಮಳೆಯಾದರೆ ಮಂಜು ಮುಸುಕಿ ಜೋಗ ಜಲಪಾತ ವೀಕ್ಷಣೆಗೆ ಹೋಗುವ ಪ್ರವಾಸಿಗರಿಗೆ ನಿರಾಸೆ ಉಂಟಾಗುತ್ತದೆ. ಶನಿವಾರ, ಭಾನುವಾರ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಜೋಗ ಜಲಪಾತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಜಲಪಾತದ ರಾಜ, ರಾಣಿ, ರೋರರ್ ಮತ್ತು ರಾಕೆಟ್‌ಗಳ ಮೂಲಕ ಜಲಧಾರೆ ಧುಮ್ಮಿಕ್ಕುತ್ತಿದೆ. ಜಲಪಾತ ದ ಸೌಂದರ್ಯಕ್ಕೆ ಪ್ರವಾಸಿಗರು ಮಾರು ಹೋಗಿದ್ದಾರೆ.