ಧಾರವಾಡ, ಜುಲೈ 03: ಪ್ರವಾಸಿಗರ ನೆಚ್ಚಿನ ತಾಣವಾದ ಗೋವಾಕ್ಕೆ (Goa) ಹೋಗಬೇಕೆಂದರೆ ಉತ್ತರ ಕರ್ನಾಟಕದ ಬಹುತೇಕ ಜನರು ಧಾರವಾಡದ (Dharwad) ಮೂಲಕವೇ ಹೋಗಬೇಕು. ಧಾರವಾಡದಿಂದ ಗೋವಾಕ್ಕೆ ಹೋಗಬೇಕೆಂದರೆ ಎರಡು ರೈಲ್ವೆ ಗೇಟ್ ಬರುತ್ತವೆ. ಇದನ್ನು ತಪ್ಪಿಸಲು ಹಲವಾರು ವರ್ಷಗಳ ಹಿಂದೆ ನಿರ್ಮಿಸಲು ಉದ್ದೇಶಿಸಿದ್ದ ಮೇಲ್ಸೇತುವೆಗಳು (Flyover) ಅರ್ಧಕ್ಕೆ ನಿಂತು ಹೋಗಿದ್ದವು. ಎರಡು ವರ್ಷಗಳ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೇಂದ್ರ ಸರಕಾರದಿಂದ ವಿಶೇಷ ಅನುದಾನ ತಂದಿದ್ದರು. ಈ ಸೇತುವೆಗಳು ಮುಗಿಯುವ ಹಂತಕ್ಕೆ ಬಂದರೂ ರಾಜ್ಯ ಸರಕಾರದ ಅವಿವೇಕತನದಿಂದಾಗಿ ಇದೀಗ ಕೆಲಸ ನಿಂತು ಹೋಗಿದೆ.
ಧಾರವಾಡದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಇತ್ತೀಚಿಗೆ ಮತ್ತೆ ಎರಡು ಹೊಸ ರೈಲು ಟ್ರ್ಯಾಕ್ ಆಗಿರುವುದರಿಂದ ರೈಲುಗಳ ಓಡಾಟವೂ ಹೆಚ್ಚಾಗಿದೆ. ಹೀಗಾಗಿ ಗೇಟ್ ತೆರೆದಿರುವುದಕ್ಕಿಂತ ಹೆಚ್ಚು ಮುಚ್ಚಿರುತ್ತದೆ. ಇದೇ ಕಾರಣಕ್ಕೆ ಇಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅಲ್ಲದೆ ಇದನ್ನು ಟೋಲ್ ರಸ್ತೆ ಮಾಡಲು ಉದ್ದೇಶಿಸಿ ರಾಜ್ಯ ಸರಕಾರ ಚೆನ್ನೈ ಮೂಲದ ಕಂಪನಿಗೆ ಗುತ್ತಿಗೆ ಕೊಟ್ಟಿತ್ತು.
ಆದರೆ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಬಳ್ಳಾರಿಯಲ್ಲಿ ಗಣಿ ಚಟುವಟಿಕೆಗೆ ಬ್ರೇಕ್ ಬಿದ್ದಿದ್ದರಿಂದ, ಈ ರಸ್ತೆ ಮೂಲಕ ಓಡಾಡುವ ಲಾರಿಗಳ ಸಂಖ್ಯೆ ಕಡಿಮೆಯಾಗುತ್ತೆ ಅಂತ ಹೇಳಿ ಆ ಕಂಪನಿ ಗುತ್ತಿಗೆಯನ್ನು ಸ್ಥಗಿತಗೊಳಿಸಿತು. ಈ ಹಿನ್ನೆಲೆಯಲ್ಲಿ ಧಾರವಾಡದ ಕೆಲಗೇರಿ ಬಡಾವಣೆ ಹಾಗೂ ಅಳ್ನಾವರ ತಾಲೂಕಿನ ಕೋಗಿಲಗೇರಿ ಗ್ರಾಮದ ಬಳಿಯ ಎರಡು ಸೇತುವೆಗಳ ಕಾಮಗಾರಿ ಅರ್ಧಕ್ಕೆ ನಿಂತು ಬಿಟ್ಟಿತು. ಸುಮಾರು ಹತ್ತು ವರ್ಷಗಳ ಬಳಿಕ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಎಲ್ಲ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ, ಈ ಎರಡೂ ಸೇತುವೆಗಳ ಪೂರ್ಣಗೊಳಿಸಲು 50 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ತಂದರು. ಇದರಲ್ಲಿ ಅರ್ಧ ಭಾಗವನ್ನು ರಾಜ್ಯ ಸರಕಾರ ನೀಡಬೇಕು. ಆದರೆ ರಾಜ್ಯದಲ್ಲಿ ಹೊಸ ಸರಕಾರ ಬಂದ ಬಳಿಕ ಹಣ ನೀಡದೆ ಇರುವುದರಿಂದ ಸಮಸ್ಯೆಯಾಗಿದೆ.