ಚನ್ನಮ್ಮನ ಕಿತ್ತೂರು : ಮಕ್ಕಳ ಮಾರಾಟ ಹಾಗೂ ಭ್ರೂಣ ಹತ್ಯೆ ಪ್ರಕರಣದ ಬೆನ್ನಲೇ ಕಿತ್ತೂರಿನಲ್ಲಿ ಬುಧವಾರ ಮತ್ತೆ ಎರಡು ಆಸ್ಪತ್ರೆಗಳಿಗೆ ತಾಲೂಕು ವೈದ್ಯಧಿಕಾರಿಗಳು ಭೇಟಿ ನೀಡಿ ಆಸ್ಪತ್ರೆಗಳನ್ನು ಬಂದ್ ಮಾಡಿದ್ದಾರೆ.
ಇಲ್ಲಿಯ ಪೊಲೀಸ್ ಠಾಣೆ ಎದುರು ಕಾಲೇಜು ರಸ್ತೆಯಲ್ಲಿರುವ ಮಹೇಶ ಹಟ್ಟಿಹೊಳಿಗೆ ಸೇರಿದ ‘ಧನ್ವಂತರಿ ಕ್ಲಿನಿಕ್’ ಹಾಗೂ ರೈತರ ಓಣಿ ಕ್ರಾಸ್ ಹತ್ತಿರ ಇರುವ ಇಬ್ರಾಹಿಂ ಜಮಾದಾರ್ ಗೆ ಸೇರಿದ ‘ಜಮಾದಾರ ಕ್ಲಿನಿಕ್’ ಅನ್ನು ಪರವಾನಿಗೆ ಇಲ್ಲದೆ ನಡೆಸುತ್ತಿದ್ದರು ಎಂದು ತಾಲೂಕು ವೈದ್ಯಾಧಿಕಾರಿ ಸಂಜಯ ಸಿದ್ದಣ್ಣವರ ಬಂದ್ ಮಾಡಿ ಅಲೋಪತಿ ಔಷಧಿಗಳನ್ನು ಜಪ್ತಿ ಮಾಡಿದ್ದಾರೆ.
‘ಹಟ್ಟಿಹೊಳಿ ಅವರು ಬಿಎಎಂಎಸ್ ಹಾಗೂ ಜಮಾದಾರ ಅವರು ಬಿಎಚ್ಎಂಎಸ್ ಪದವಿ ಪಡೆದ ವೈದ್ಯರಾಗಿದ್ದಾರೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (ಕೆಪಿಎಂಎಸ್) ಕಾಯಿದೆ ಅಡಿ ಕ್ಲಿನಿಕ್ ನೋಂದಣಿ ಮಾಡಿಕೊಂಡಿರಲಿಲ್ಲ. ಕಲಿತ ಪದ್ಧತಿ ಆಗಿರುವ ಆಯುರ್ವೇದ ಹಾಗೂ ಹೊಮಿಯೊಪಥಿಕ್ ನಲ್ಲಿ ವೈದ್ಯಕೀಯ ವೃತ್ತಿ ಕೈಗೊಂಡಿರಲಿಲ್ಲ’ ಎಂದು ತಾಲೂಕು ವೈದ್ಯಾಧಿಕಾರಿ ಸಂಜಯ ಸಿದ್ದಣ್ಣವರ ಮಾಹಿತಿ ನೀಡಿದರು.
ಈ ವೇಳೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಮಾದ್ ರಾಜಗೋಳಿ ಹಾಗೂ ಸಿಬ್ಬಂದಿ ತಂಡಲ್ಲಿದ್ದರು.