ಬೆಂಗಳೂರು: ನಟ ದರ್ಶನ್ ಅಭಿಮಾನಿಗಳಿಂದ ನಿರಂತರ ಜೀವ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬಿಗ್ಬಾಸ್ ವಿಜೇತ ಹಾಗೂ ನಟ ಪ್ರಥಮ್ ಜ್ಞಾನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರು ನೀಡಿರುವ ಬಗ್ಗೆ ಪ್ರಥಮ್ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಖಚಿತಪಡಿಸಿದ್ದಾರೆ.
ಅಲ್ಲದೆ, ದರ್ಶನ್ ಅಭಿಮಾನಿಗಳಿಗೆ ಬುದ್ಧಿಮಾತು ಸಹ ಹೇಳಿದ್ದಾರೆ.
ಜೀವನ ದೊಡ್ಡದು, ಯಾರಿಗೋಸ್ಕರವೋ ಹಾಳು ಮಾಡಿಕೊಳ್ಳಬೇಡಿ. ನಾನು ಶಾಂತಿಯಿಂದಲೇ ಇದ್ದೆ. ಆದರೆ, ನೀವು ಅತಿಯಾಗಿ ನಮ್ಮ ‘ಕರ್ನಾಟಕದ ಅಳಿಯ’ ಸಿನಿಮಾ ತಂಡದ ಕಚೇರಿ ನಂಬರ್ಗೆ ಕರೆ ಮಾಡಿ ಬೆದರಿಕೆ ಹಾಕುತಿದ್ದೀರಾ! ಇನ್ಮೇಲೆ ನನಗೆ ಬರುವ ಕರೆ, ಮೆಸೇಜ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಗಳು ಸೇರಿದಂತೆ ಎಲ್ಲವನ್ನು ಪೋಲೀಸರು ನೋಡಿಕೊಳ್ಳುತ್ತಾರೆ. ಬದುಕು ಸುಂದರವಾದದ್ದು ಅಂಧಾಭಿಮಾನಿಗಳೇ ಅದನ್ನು ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ ಎಂದು ಪ್ರಥಮ್ ಹೇಳಿದ್ದಾರೆ.
ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳಿಗೇಕೆ ಸಿಟ್ಟು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಮ್ಮ ಬಾಸ್ ದರ್ಶನ್ ಅವರದ್ದು ಏನು ತಪ್ಪಿಲ್ಲ ಎಂದು ಅಭಿಮಾನಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ನಟ ಪ್ರಥಮ್ ಅವರನ್ನು ಖಾಸಗಿ ಸುದ್ದಿವಾಹಿನಿಯೊಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಪ್ರಥಮ್, ಅನ್ನಪೂರ್ಣೇಶ್ವರಿ ನಗರ ಠಾಣೆ ನಮ್ಮ ಮನೆಯಿಂದ ಹತ್ತಿರದಲ್ಲಿದೆ. ಅಲ್ಲಿನ ಇನ್ಸ್ಪೆಕ್ಟರ್ ಅಥವಾ ಎಸಿಪಿಗೆ ಹೇಳಿ ಒಂದು ವಾರದ ಮಟ್ಟಿಗೆ ಪೊಲೀಸ್ ಕಾನ್ಸ್ಟೆಬಲ್ ಆಗಲು ನನಗೆ ಅನುಮತಿ ಕೊಡಿಸಿ, ನಗೆ ಸಂಬಳ ಕೊಡಬೇಕಾಗಿಲ್ಲ, ಒಂದು ದೊಣ್ಣೆ ಸಿಕ್ಕಿದರೆ ಸಾಕು ಸ್ಟೇಷನ್ ಮುಂದೆ ನಿಂತಿರುವವರಿಗೆಲ್ಲರಿಗೂ ನಾಯಿಗೆ ಹೊಡೆದಂಗೆ ಹೊಡೆಯುತ್ತೇನೆ. ಏಕೆಂದರೆ, ಅಲ್ಲಿರುವ ಒಬ್ಬ ಮಗಾನೂ ಅವರ ಅಮ್ಮನಿಗೆ ಒಂದು ಹೊತ್ತು ಹಿಟ್ಟು ಕೊಡಿಸುವ ಯೋಗ್ಯತೆ ಇಲ್ಲ. ಕೆಲವರು ಭ್ರಮೆಯಲ್ಲಿದ್ದಾರೆ. ನಮ್ಮಿಂದ ಟಿಆರ್ಪಿ ಮತ್ತು ನಮ್ಮ ಬಾಸ್ನಿಂದ ಟಿಆರ್ಪಿ ಬರುತ್ತೆ ಎಂಬ ಭ್ರಮಾ ಲೋಕದಲ್ಲಿ ಮುಳುಗಿದ್ದಾರೆ. ಇವರೆಲ್ಲ ವಾಟ್ಸ್ಆಯಪ್ ಯೂನಿವರ್ಸಿಟಿ ಮಂದಿ, ಮಾಧ್ಯಮ ಹೇಗೆ ನಡೆಯುತ್ತದೆ ಎಂಬುದೇ ಗೊತ್ತಿಲ್ಲ ಎಂದು ದರ್ಶನ್ ಅಭಿಮಾನಿಗಳನ್ನು ಪ್ರಥಮ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
Laxmi News 24×7