ಬೈಲಹೊಂಗಲ: ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುರುವಾರ ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಬಿರುಸಿನ ಮಳೆ ಬಿದ್ದು, ಪಟ್ಟಣದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.
ಹೊಸೂರ ರಸ್ತೆಯ ವಿಜಯ ಸೋಸಿಯಲ್ ಕ್ಲಬ್, ಪೊಲೀಸ್ ಠಾಣೆ, ಬಸ್ ನಿಲ್ದಾಣ ಮುಖ್ಯ ರಸ್ತೆಗಳು ಮಳೆ ನೀರಿನಿಂದಾಗಿ ಕೆರೆಯಂತೆ ಕಂಡವು.
ಕಾರ್, ಬೈಕ್ ಸವಾರರು ಸಂಚಾರಕ್ಕೆ ಪರದಾಡುವಂತಾಯಿತು.
ಈಟಿ ಬಸವೇಶ್ವರ ದೇವಸ್ಥಾನ ಹತ್ತಿರದ ಎಂ.ಜೆ. ಹೌಸಿಂಗ್ ಕಾಲೊನಿಯಲ್ಲು ಬಿರುಗಾಳಿ- ಮಳೆ ಬಂದಿತು. ಇಲ್ಲಿ ಡಾಂಬರ್ ಅಥವಾ ಸಿಮೆಂಟ್ ರಸ್ತೆಗಳು ಇಲ್ಲದ ಕಾರಣ ಇಡೀ ಕಾಲೊನಿ ಕೆಸರುಮಯವಾಯಿತು.
ಇಂಚಲ ಕ್ರಾಸ್‌ನಲ್ಲಿ ಗಟಾರುಗಳು ತುಂಬಿ ಹರಿದಿದ್ದರಿಂದ ತಾಲ್ಲೂಕು ಕೇಂದ್ರ ಬಸ್ ನಿಲ್ದಾಣ, ರಾಯಣ್ಣ ವೃತ್ತದ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ನೀರು ತುಂಬಿ ಹರಿಯಿತು. ಬಜಾರ ರಸ್ತೆಯ ಗಣಾಚಾರಿ ಮಳಿಗೆ ಹಿಂಬದಿಯ ಗಟಾರಗಳು ತುಂಬಿ ತ್ಯಾಜ್ಯ ಸಮೇತ ಮುಖ್ಯ ರಸ್ತೆ ಮೇಲೆ ಹರಿಯಿತು. ಇದರಿಂದಾಗಿ ಬಜಾರ ರಸ್ತೆ ಕೆಲಕಾಲ ದುರ್ವಾಸನೆಯಿಂದ ಕೂಡಿತ್ತು.