ಬೆಂಗಳೂರು, ಜೂ.6-ಪ್ರಸಕ್ತ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಯಾರಾಗಲಿದ್ದಾರೆ ಎಂಬ ಚರ್ಚೆ ಪ್ರಾರಂಭವಾಗಿದೆ. ಶಾಸಕಾಂಗ ಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂಸದರಾಗಿರುವ ಹಿನ್ನೆಲೆಯಲ್ಲಿ ಆ ಸ್ಥಾನ ತೆರವಾಗಲಿದೆ.
ಜೆಡಿಎಸ್‌ನಲ್ಲಿ ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಜಿ.ಟಿ.ದೇವೇಗೌಡ ಹಾಗೂ ಶ್ರೀನಿವಾಸಪುರ ಕ್ಷೇತ್ರದ ವೆಂಕಟಶಿವಾರೆಡ್ಡಿ ಅವರು ಹಿರಿಯ ಶಾಸಕರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಸಂಸದರಾಗಿದ್ದ ಸಂದರ್ಭದಲ್ಲೂ ರೇವಣ್ಣ ಅವರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದರು.
ಜಿ.ಟಿ.ದೇವೇಗೌಡ ಅವರು ಪ್ರಸ್ತುತ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿದ್ದಾರೆ. ಕಟಶಿವಾರೆಡ್ಡಿ ಅವರಿಗೆ ಇಂತಹ ಯಾವ ಜವಾಬ್ದಾರಿಯನ್ನು ಈತನಕ ನೀಡಿಲ್ಲ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಜಿ.ಟಿ.ದೇವೇಗೌಡರ ಹೆಸರು ಮುಂಚೂಣಿಯಲ್ಲಿದೆ. ಆದರೆ, ಪ್ರಸಕ್ತ ವಿಧಾನಸಭೆಯಲ್ಲಿ ರೇವಣ್ಣ ಅವರು ಎಲ್ಲರಿಗಿಂತ ಹಿರಿಯ ಶಾಸಕರಾಗಿದ್ದಾರೆ.