ಚಿಕ್ಕೋಡಿ: ಲೋಕಸಭೆ ಕ್ಷೇತ್ರಕ್ಕೆ ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮೊದಲ ಯತ್ನದಲ್ಲೇ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ 90,834 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಇಲ್ಲಿನ ಆರ್.ಡಿ ಕಾಲೇಜು ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಮತಗಳ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು.
ಮಧ್ಯಾಹ್ನದವರೆಗೆ 22 ಸುತ್ತುಗಳ ಎಣಿಕೆ ನಡೆಯಿತು. ಮೊದಲ ಸುತ್ತಿನಲ್ಲಿ 8,533 ಮತಗಳ ಮುನ್ನಡೆ ಸಾಧಿಸಿದ ಪ್ರಿಯಾಂಕಾ, ಎರಡನೇ ಸುತ್ತಿನಲ್ಲಿ 20,314 ಮತಗಳ ಮುನ್ನಡೆ ಕಾಯ್ದುಕೊಂಡರು. 10, 16 ಮತ್ತು 17ನೇ ಸುತ್ತುಗಳಲ್ಲಿ ಅಣ್ಣಾಸಾಹೇಬ ಜೊಲ್ಲೆ ಹೆಚ್ಚಿನ ಮತ ಗಳಿಸಿದ್ದು ಬಿಟ್ಟರೆ, ಪ್ರತಿ ಸುತ್ತಿನಲ್ಲೂ ಪ್ರಿಯಾಂಕಾ ಹೆಚ್ಚಿನ ಮತಗಳೊಂದಿಗೆ ತಮ್ಮ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತ ಹೋದರು.
ತಮ್ಮ ಅಭ್ಯರ್ಥಿ ಗೆಲ್ಲುವುದು ಖಾತ್ರಿಯಾಗುತ್ತಿದ್ದಂತೆ ಕಾಲೇಜಿನ ಹೊರಗೆ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆರಂಭಿಸಿದ್ದರು.
ಕಣದಲ್ಲಿ 18 ಮಂದಿ: ಚಿಕ್ಕೋಡಿ ಕ್ಷೇತ್ರದಲ್ಲಿ 18 ಮಂದಿ ಕಣದಲ್ಲಿದ್ದರು. ಈ ಪೈಕಿ ಪ್ರಿಯಾಂಕಾ ಜಾರಕಿಹೊಳಿ 7,13,461 ಮತ ಪಡೆದರೆ, ಅಣ್ಣಾಸಾಹೇಬ ಜೊಲ್ಲೆ 6,22,627 ಮತ ಗಳಿಸಿದರು. ಪಕ್ಷೇತರರಾಗಿ ಕಣಕ್ಕಿಳಿದಿದ್ದ ಶಂಭು ಕಲ್ಲೋಳಿಕರ 25,466 ಮತ ಪಡೆದರು. ಏಳು ಅಭ್ಯರ್ಥಿಗಳ ಪಡೆದ ಮತ ಮೂರಂಕಿ ದಾಟಲಿಲ್ಲ. 2,608 ಮತದಾರರು ‘ನೋಟಾ’ ಚಲಾಯಿಸಿದ್ದಾರೆ.
ಒಟ್ಟು 13,93,093 ಮತ ಚಲಾವಣೆಯಾಗಿವೆ. 9,600 ಅಂಚೆ ಮತಗಳ ಪೈಕಿ ಪ್ರಿಯಾಂಕಾ 4,459, ಅಣ್ಣಾಸಾಹೇಬ 2,638 ಮತ ಗಳಿಸಿದ್ದಾರೆ. 2,236 ಅಂಚೆ ಮತ ತಿರಸ್ಕೃತವಾಗಿವೆ.