ಬೆಂಗಳೂರು: ಕಳೆದ 10 ದಿನಗಳಿಂದ ಎದ್ದಿರುವ ಕೊರೊನಾ ಮಹಾ ಸುನಾಮಿಗೆ ತತ್ತರಿಸಿರುವ ರಾಜ್ಯ ಸರ್ಕಾರ, ರಾಜಧಾನಿಯನ್ನು ಒಂದು ವಾರ ಲಾಕ್‍ಡೌನ್ ಮಾಡಿ ಆದೇಶ ಹೊರಡಿಸಿದೆ. ಮಂಗಳವಾರದಿಂದ ಅಂದ್ರೆ ಜುಲೈ 14ರಿಂದ ರಾತ್ರಿ 8 ಗಂಟೆಯಿಂದ ಜುಲೈ 22ರ ನಸುಕಿನಜಾವ ಐದು ಗಂಟೆಯವರೆಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಲಾಕ್‍ಡೌನ್ ಆಗಲಿದೆ.
ಈ ಸಂಬಂಧ ರಾತ್ರಿ 8 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಈ ಪ್ರಕಟಣೆ ಮಾಡಿದರು. ಸೋಂಕು ತಡೆಗೆ, ಸಂಡೇ ಲಾಕ್‍ಡೌನ್ ಫಲ ಕೊಡದ ಹಿನ್ನೆಲೆಯಲ್ಲಿ ಮತ್ತೆ ಕಂಪ್ಲೀಟ್ ಲಾಕ್‍ಡೌನ್‍ಗೆ ರಾಜ್ಯದ ಜನರ ಒತ್ತಾಯಿಸಿದ್ದರು. ಕೊರೋನಾ ತಜ್ಞರು ಕನಿಷ್ಠ 10ರಿಂದ 15 ದಿನಗಳ ಕಾಲ ಬೆಂಗಳೂರನ್ನು ಲಾಕ್‍ಡೌನ್ ಮಾಡುವಂತೆ ಸಲಹೆ ನೀಡಿದ್ದರು. ಆದ್ರೆ ಕುಸಿದ ಆರ್ಥಿಕತೆಯನ್ನು ಗಮನದಲ್ಲಿರಿಸಿಕೊಂಡ ಸಿಎಂ ಯಡಿಯೂರಪ್ಪ ಸಂಜೆಯವರೆಗೂ ಲಾಕ್‍ಡೌನ್‍ಗೆ ಸಮ್ಮತಿ ಸೂಚಿಸಿರಲಿಲ್ಲ. ಆದರೆ ಇಂದು ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 1500 ದಾಟಿದ ಹಿನ್ನೆಲೆಯಲ್ಲಿ ಆತಂಕಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸರ್ಕಾರದ ಅನುಮತಿ ಪಡೆದು ಒಂದು ವಾರದ ಲಾಕ್‍ಡೌನ್‍ಗೆ ಆದೇಶ ನೀಡಿದ್ದಾರೆ.
ಮಂಗಳವಾರ ರಾತ್ರಿಯಿಂದ ಬೆಂಗಳೂರು ಸಂಪೂರ್ಣ ಲಾಕ್‍ಡೌನ್ ಆಗಲಿದೆ. ಜನರು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು, ತಮ್ಮ ಗಮ್ಯ ಸೇರಲು ಮಂಗಳವಾರದವರೆಗೂ ಸರ್ಕಾರ ಅವಕಾಶ ನೀಡಿದೆ. ಉಳಿದಂತೆ ರಾಜ್ಯದ ಇತರೆ ಜಿಲ್ಲೆಗಳಿಗೆ ಈ ಲಾಕ್‍ಡೌನ್ ಅನ್ವಯ ಆಗಲ್ಲ. ಸೋಮವಾರ ಈ ಆದೇಶ ಪರಿಷ್ಕರಣೆ ಆಗಬಹುದು. ಕೆಲ ಜಿಲ್ಲೆಗಳು ಸಹ ಲಾಕ್‍ಡೌನ್ ಆಗಬಹುದು ಎನ್ನಲಾಗುತ್ತಿದೆ.
8 ದಿನಗಳ ಲಾಕ್‍ಡೌನ್ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ
ಲಾಕ್ ಹೊತ್ತಲ್ಲಿ ಏನಿರುತ್ತೆ?
* ಅಗತ್ಯ ಮತ್ತು ತುರ್ತು ಸೇವೆಗಳಿಗಷ್ಟೇ ಅವಕಾಶ
* ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆ
* ಆಸ್ಪತ್ರೆಗಳು, ಔಷಧಿ
* ದಿನಸಿ, ಹಾಲು, ಹಣ್ಣು, ತರಕಾರಿ
ಏನಿರಲ್ಲ?
* ಜುಲೈ 14ರಿಂದ ಜುಲೈ 22ರವರೆಗೂ ಬೆಂಗಳೂರು ಲಾಕ್
* ಬಸ್, ಆಟೋ, ಟ್ಯಾಕ್ಸಿ ಸಂಚಾರ ಸಂಪೂರ್ಣ ಸ್ತಬ್ಧ
* ಖಾಸಗಿ ವಾಹನಗಳ ಓಡಾಟ ಸಂಪೂರ್ಣ ಬಂದ್
* ಅಂತಾರಾಜ್ಯ, ಅಂತರ್‍ಜಿಲ್ಲೆ ಸಂಪರ್ಕ ಬಂದ್
* ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆ ಬಂದ್
* ಜನರು ಮನೆಯಿಂದ ಹೊರಗೆ ಬರುವಂತೆ ಇಲ್ಲ
* ಜನರ ಓಡಾಟ ನಿಯಂತ್ರಿಸಲು ಪೊಲೀಸರಿಗೆ ಫುಲ್ ಪವರ್