ನವದೆಹಲಿ: ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ಪಡೆಯಲು ಮತ್ತು ವೈದ್ಯರ ಸಹಾಯ ಪಡೆಯಲು ನಿರಾಕರಿಸುವ ಮೂಲಕ ಅವರನ್ನು ನಿಧಾನವಾಗಿ ಸಾವಿನೆಡೆಗೆ ತಳ್ಳಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ವಕ್ತಾರ ಸೌರಭ್ ಭಾರದ್ವಾಜ್, ‘ಕೇಜ್ರಿವಾಲ್ ಅವರು ಡಯಾಬಿಟಿಸ್ (ಮಧುಮೇಹ) ಹೊಂದಿದ್ದಾರೆ.
ಆದ್ದರಿಂದ ಇನ್ಸುಲಿನ್ ಪಡೆಯಲು ಮತ್ತು ಅವರ ಕುಟುಂಬ ವೈದ್ಯರನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಲು ಅನುಮತಿ ಕೋರಿದ್ದಾರೆ. ಆದರೆ, ಅವರ ಮನವಿಯನ್ನು ಜೈಲಿನ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಕಳೆದ 20-22 ವರ್ಷಗಳಿಂದ ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಇನ್ಸುಲಿನ್ ಪಡೆಯಲು ನಿರಾಕರಿಸುವ ಮೂಲಕ ಅವರ ಸಾವಿಗೆ ಪಿತೂರಿ ನಡೆಯುತ್ತಿದೆ’ ಎಂದು ಭಾರದ್ವಾಜ್ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದಾಗಿನಿಂದ ಅವರ ಸಕ್ಕರೆ ಮಟ್ಟವನ್ನು (ಶುಗರ್ ಲೆವಲ್) ನಿಯಂತ್ರಿಸಲು ಇನ್ಸುಲಿನ್ ಅನ್ನು ನೀಡಲಾಗಿಲ್ಲ. ಇದು ಆತಂಕಕಾರಿಯಾಗಿದೆ ಎಂದು ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.
Laxmi News 24×7