ನವದೆಹಲಿ: ಬಳ್ಳಾರಿ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಹಿನ್ನಡೆಯಾಗಿದ್ದು, ಬಳ್ಳಾರಿ ಪ್ರವೇಶದ ಅರ್ಜಿಗೆ ಸಿಬಿಐ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಡಿಸೆಂಬರ್‍ನಲ್ಲಿ ಪ್ರಕರಣದ ವಿಸ್ತೃತ ವಿಚಾರಣೆ ನಡೆಸಲು ಮುಂದಾಗಿದೆ. ಬಳ್ಳಾರಿ ಸೇರಿ 3 ಜಿಲ್ಲೆಗಳ ಪ್ರವೇಶಕ್ಕೆ ಜನಾರ್ಧನ ರೆಡ್ಡಿ ಅನುಮತಿ ಕೋರಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರೆಡ್ಡಿ ಮನವಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿದೆ.
ಜನಾರ್ಧನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಅನುಮತಿ ಬೇಡ. ಬಳ್ಳಾರಿಯಲ್ಲಿ ಅವರು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಲಿದ್ದಾರೆ. ತನಿಖಾಧಿಕಾರಿಗಳ ವಾಹನ ಸುಡಲಾಗಿದೆ. ಭದ್ರಯೆಯಲ್ಲಿರುವ ಸಾಕ್ಷಿಗಳನ್ನೂ ಬೆದರಿಸಲಾಗುತ್ತಿದೆ. ಒಟ್ಟು 47 ಸಾಕ್ಷ್ಯಗಳು ಬಳ್ಳಾರಿಯಲ್ಲಿವೆ. ರೆಡ್ಡಿ ಬಳ್ಳಾರಿ ಪ್ರವೇಶಿಸಿದರೆ ಏನು ಬೇಕಾದರೂ ಆಗಬಹುದು. ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿದರೆ ತನಿಖೆ ನಡೆಸುವುದು ಹೇಗೆ? ಎಂದು ರೆಡ್ಡಿ ಮನವಿಗೆ ಸಿಬಿಐ ಪ್ರಬಲ ವಿರೋಧವೊಡ್ಡಿತು.
ಸಿಬಿಐ ವಾದಕ್ಕೆ ಜನಾರ್ದನ ರೆಡ್ಡಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಸಿಬಿಐ ಪರ ವಕೀಲರ ವಾದದಲ್ಲಿ ಸತ್ಯಾಂಶವಿಲ್ಲ. ಜನಾರ್ದನ ರೆಡ್ಡಿ ಸಾಕ್ಷ್ಯ ನಾಶಕ್ಕೆ ಪ್ರಯತ್ನ ಮಾಡಿಲ್ಲ. ಬೇರೆಯವರು ಜಾಮೀನು ಅರ್ಜಿ ಸಲ್ಲಿಸಿದರೆ ನಾವು ಹೊಣೆಯಲ್ಲ, ಎಂದರು.
ವಾದದ ಬಳಿಕ ವಿಸ್ತೃತ ಪ್ರಮಾಣಪತ್ರ ಸಲ್ಲಿಸುವಂತೆ ಕೋರ್ಟ್ ಸಿಬಿಐಗೆ ಸೂಚನೆ ನೀಡಿದೆ. ಅಲ್ಲದೆ, ಡಿಸೆಂಬರ್‍ನಲ್ಲಿ ಸುಪ್ರೀಂಕೋರ್ಟ್ ವಿಸ್ತೃತ ವಿಚಾರಣೆ ನಡೆಸಲಿದೆ.
