ಹುಬ್ಬಳ್ಳಿ: ‘ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗದೇ ಬಂಡಾಯವೆದ್ದಿರುವವರ ಜೊತೆ ಮಾತುಕತೆ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈಶ್ವರಪ್ಪ ಸೇರಿದಂತೆ ಬಂಡಾಯ ಎದ್ದಿರುವವರ ಜೊತೆಗೆ ಮಾತುಕತೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಲೋಕಸಭೆ ಚುನಾವಣೆಗೆ ದಿನಾಂಕವೂ ಘೋಷಣೆಯಾಗಿದೆ. ದೇಶದಾದ್ಯಂತ ಬಿಜೆಪಿ ಪರ ಅಲೆ ಇದೆ. 3ನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಶ್ಚಿತ. ರಾಜ್ಯದಿಂದ 25ರಿಂದ 26 ಕ್ಷೇತ್ರಗಳನ್ನು ಗೆದ್ದು ಮೋದಿ ಅವರಿಗೆ ಕೊಡುಗೆ ನೀಡುತ್ತೇವೆ’ ಎಂದರು.
ಎಸ್.ಸಿ, ಎಸ್.ಟಿ, ಹಿಂದುಳಿದ ವರ್ಗಗಳು ಹಾಗೂ ಯುವಕರ ಕಡೆ ಹೆಚ್ಚು ಗಮನ ಕೊಡುವಂತೆ ಮೋದಿ ಅವರು ಸಲಹೆ ನೀಡಿದ್ದಾರೆ. ಅದರಂತೆ, ಮಾಡುತ್ತೇವೆ. ಈಗಿನಿಂದಲೇ ಮುಖಂಡರು ಪ್ರಚಾರ ಶುರು ಮಾಡಲಿದ್ದಾರೆ ಎಂದು ಹೇಳಿದರು.