ಹಾಸನ: ಜಿಲ್ಲೆಯ ಅರಸೀಕೆರೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಕೆಲವೊಂದು ಗಾರ್ಮೆಂಟ್ಸ್‌ನವರು ಇಂದಿನಿಂದ ತಮ್ಮ ನೌಕರರಿಗೆ ಕೆಲವು ದಿನಗಳ ಕಾಲ ರಜೆ ನೀಡಿ ಮನೆಗೆ ಕಳುಹಿಸಿದ್ದಾರೆ.
ಅಷ್ಟೇ ಅಲ್ಲದೇ ಅರಸೀಕೆರೆ ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆಲವು ಕೆಎಸ್‌ಆರ್‌ಟಿಸಿ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅರಸೀಕೆರೆ ಡಿಪೋದಿಂದ ಸಂಚರಿಸುತ್ತಿದ್ದ ಬಸ್‍ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಈ ಬಗ್ಗೆ ಶುಕ್ರವಾರ ರಾತ್ರಿಯಷ್ಟೇ ಸಭೆ ನಡೆಸಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕೊರೊನಾ ವಿರುದ್ಧದ ಹೋರಾಟಕ್ಕೆ ಸ್ವಯಂಪ್ರೇರಿತವಾಗಿ ಸಹಕರಿಸುವಂತೆ ಮನವಿ ಮಾಡಿದ್ದರು. ಇದೀಗ ಕೆಲವು ಗಾರ್ಮೆಂಟ್ಸ್ ಮಾಲೀಕರು ಮತ್ತು ಅರಸೀಕೆರೆ ಡಿಪೋ ಅಧಿಕಾರಿಗಳು ಶಾಸಕರ ಮನವಿಗೆ ಸ್ಪಂದಿಸಿ ತಮ್ಮ ಕೆಲಸಗಾರರಿಗೆ ತಾತ್ಕಾಲಿಕವಾಗಿ ರಜೆ ನೀಡಿದ್ದಾರೆ.