ಬೆಂಗಳೂರು, ನ.13- ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆಗೂ ಅಭಿಮಾನಿ ಸಂಸ್ಥೆಗೂ ಅವಿನಾಭಾವ ಸಂಬಂಧ. ಉಪನ್ಯಾಸಕ ವೃತ್ತಿ ತೊರೆದು 1987ರಲ್ಲಿ ಬೆಂಗಳೂರಿಗೆ ಬಂದಾಗ ಅವರು ಡಾ.ರಾಜ್‍ಕುಮಾರ್ ರಸ್ತೆಯ ಅಭಿಮಾನಿ ಪ್ರಕಾಶನದ ಬಳಿ ನಿಂತಿದ್ದರು.
ಇಲ್ಲಿ ತಮ್ಮ ಪತ್ರಕರ್ತ ಜೀವನ ವೃತ್ತಿ ಕಟ್ಟಿಕೊಳ್ಳಲು ಭಾರೀ ಕನಸು ಕಂಡಿದ್ದರು. ಆಗ ಅಭಿಮಾನಿ ಪ್ರಕಾಶನ ವತಿಯಿಂದ ಹೊರತರಲಾಗುತ್ತಿದ್ದ ಪೊಲೀಸ್ ಫೈಲ್ ಹಾಗೂ ಹಲವು ನಿಯತಾಲಿಕೆಗಳು ಪ್ರಕಟಗೊಳ್ಳುತ್ತಿದ್ದವು. ಇಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರೊಬ್ಬರು ರವಿಬೆಳಗೆರೆ ಅವರನ್ನು ಕಂಡು ನೇರವಾಗಿ ಕಚೇರಿಯೊಳಗೆ ಕರೆತಂದು ಸಂಪಾದಕರನ್ನು ಭೇಟಿ ಮಾಡಿಸುತ್ತಾರೆ. ಅವರ ಬರವಣಿಗೆ ಮತ್ತು ಅವರ ಮುಖದಲ್ಲಿದ್ದ ಹುಮ್ಮಸ್ಸು , ಶ್ರದ್ಧೆಯನ್ನು ಕಂಡು ತಕ್ಷಣ ಅವರಿಗೆ ನೌಕರಿ ಸಿಕ್ಕಿತ್ತು.
ಆಗ ಪ್ರಕಟಗೊಳ್ಳುತ್ತಿದ್ದ ಅಭಿಮಾನಿ ವಾರಪತ್ರಿಕೆ ನಂತರ ಅಭಿಮಾನ ದಿನಪತ್ರಿಕೆಯಲ್ಲಿ ಅವರು ಸುಮಾರು 2 ವರ್ಷಗಳ ಕಾಲ ಕೆಲಸ ಮಾಡಿದರು.ಇಂದು ಹಲವು ಪತ್ರಿಕೆಗಳಲ್ಲಿ ದಿಗ್ಗಜರೆನಿಸಿಕೊಂಡಿರುವ ಖ್ಯಾತನಾಮ ಪತ್ರಕರ್ತರ ಒಡನಾಟ ಇಲ್ಲಿ ಬೆಳೆದಿತ್ತು. ಇದರ ನಡುವೆ ಬೆಂಗಳೂರು ಅಷ್ಟಾಗಿ ಪರಿಚಯವಿಲ್ಲದ ಕಾರಣ ಪತ್ರಿಕಾಲಯಗಳಲ್ಲಿ ಊಟ, ತಿಂಡಿ ಆಗುತ್ತಿತ್ತು.
ತಡವಾದರೆ ಕಚೇರಿಯಲ್ಲೇ ಮಳಗುತ್ತಿದ್ದರು. ಇದರ ನಡುವೆ ಅವರಲ್ಲಿ ಪತ್ತೇದಾರಿ ಮತ್ತು ಅಪರಾಧ ವರದಿಗಾರಿಕೆಯಲ್ಲಿ ಎತ್ತಿದ ಕೈ ಎಂಬಂತೆ ಸರಾಗವಾಗಿ ವರದಿಗಳನ್ನು ಬರೆಯುತ್ತಿದ್ದರು.
ಹಂತ ಹಂತವಾಗಿ ಮೇಲೇರಿ ಮುಖ್ಯ ವರದಿಗಾರರ ಹುದ್ದೆಯಲ್ಲೂ ಕೂಡ ಕೆಲಸ ಮಾಡಿದ್ದರು. ರವಿಬೆಳಗೆರೆ ತಾವು ಹಿಂದೆ ಅನುಭವಿಸಿದ ಕಷ್ಟ, ನಡೆದುಬಂದ ಹಾದಿಯನ್ನು ಸದಾ ಸ್ಮರಿಸುವಾಗ ಅಭಿಮಾನ ಪತ್ರಿಕೆಗೆ ಸೇರಿದ್ದು, ಮುಖ್ಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದು, ಅಲ್ಲಿ ಕಳೆದ ದಿನಗಳು, ಸಂಪಾದಕರಾದ ಟಿ.ವೆಂಕಟೇಶ್ ಅವರ ಬಗ್ಗೆ ಇದ್ದ ಅಪಾರ ಅಭಿಮಾನವನ್ನು ತಮ್ಮ ಅಕ್ಷರಗಳಲ್ಲಿ ವ್ಯಕ್ತಪಡಿಸುತ್ತಿದ್ದರಲ್ಲದೆ ಅಂದಿನ ದಿನದಲ್ಲಿ ಆಸರೆ ನೀಡಿದ ಸಂಸ್ಥೆಗೆ ಅಭಾರಿಯೆಂದು ಹಲವು ಪತ್ರಗಳನ್ನು ಬರೆದಿದ್ದರು.
ಆ ಕ್ಷಣಗಳನ್ನು ಈಗಲೂ ಅಭಿಮಾನಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ನೆನೆಯುತ್ತಾರೆ. ಸ್ನೇಹಜೀವಿಯಾಗಿ ಹೊಸತನ್ನು ಹಂಬಲಿಸುತ್ತಿದ್ದ ರವಿಬೆಳೆಗೆರೆ ಅಗಲಿಕೆಗೆ ಅಭಿಮಾನಿ ಪತ್ರಿಕಾ ಬಳಗ ಸಂತಾಪ ಸೂಚಿಸುತ್ತದೆ.