ಚೆನ್ನೈ: ತಮಿಳು ಸೂಪರ್‌ಸ್ಟಾರ್ ಕಮಲ್ ಹಾಸನ್ (Kamal Haasan) ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೊಯಮತ್ತೂರು (Coimbatore) ಅಥವಾ ಚೆನ್ನೈನಿಂದ (Chennai) ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಅಧ್ಯಕ್ಷರೂ ಆಗಿರುವ ಕಮಲ್ ಹಾಸನ್ ಅವರು, ಈಗಾಗಲೇ ಆಡಳಿತಾರೂಢ ಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.
ಹೀಗಾಗಿ 2024ರ ಲೋಕಸಭೆ ಚುನಾವಣೆಗೆ ಇಂಡಿಯಾ ಬ್ಲಾಕ್‌ನ ಭಾಗವಾಗಿದ್ದಾರೆ.
ಕೊಯಮತ್ತೂರು ಕ್ಷೇತ್ರದಿಂದ ಪ್ರಸ್ತುತ ಡಿಎಂಕೆ ಮೈತ್ರಿ ಪಕ್ಷವಾಗಿರುವ ಸಿಪಿಐ-ಎಂ ಪ್ರತಿನಿಧಿಸುತ್ತಿದ್ದರೆ, ಚೆನ್ನೈ ಉತ್ತರದಲ್ಲಿ ಡಾ ಕಲಾನಿಧಿ ವೀರಸ್ವಾಮಿ, ದಕ್ಷಿಣದಲ್ಲಿ ಡಾ ತಮಿಳಚಿ ತಂಗಪಾಂಡಿಯನ್ ಮತ್ತು ಚೆನ್ನೈನ ಕೇಂದ್ರದಲ್ಲಿ ದಯಾನಿಧಿ ಮಾರನ್ ಪ್ರತಿನಿಧಿಸಿದ್ದಾರೆ. ಮೂವರೂ ಡಿಎಂಕೆ ಪಕ್ಷದವರಾಗಿದ್ದಾರೆ.
ಹೀಗಾಗಿ ಕೊಯಮತ್ತೂರಿನಿಂದ ಸ್ಪರ್ಧಿಸಲು ಡಿಎಂಕೆ ಪಕ್ಷವು ತನ್ನ ಮೈತ್ರಿಯೊಂದಿಗೆ ಚರ್ಚಿಸಬೇಕಾಗುತ್ತದೆ. ಮೂಲಗಳ ಪ್ರಕಾರ ಕಮಲ್ ಹಾಸನ್ ಅವರ ಮೊದಲ ಆಯ್ಕೆ ಕೊಯಮತ್ತೂರು ಆಗಿದ್ದು, ಲೋಕಸಭೆ ಚುನಾವಣೆಯಲ್ಲಿ ಚೆನ್ನೈ ಉತ್ತರ, ದಕ್ಷಿಣ ಅಥವಾ ಮಧ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮನಸ್ಸಿಲ್ಲ ಎನ್ನಲಾಗಿದೆ