ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿ ಮಾಡುವ ವಿಷಯವನ್ನು ರಾಜಕೀಯ ವ್ಯಕ್ತಿಗಳು ತಮ್ಮ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಸರ್ಕಾರಗಳು ರೈತರ ಅಳಲು ಆಲಿಸುತ್ತಿಲ್ಲ. ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಎಲ್ಲ ರೀತಿಯಿಂದಲೂ ಮತ್ತೆ ತೀವ್ರ ಸ್ವರೂಪದ ಹೋರಾಟ ಆರಂಭಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಈ ಬಗ್ಗೆ ಚರ್ಚಿಸುವಾಗ ಹುಬ್ಬಳ್ಳಿ-ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಅಭಿಪ್ರಾಯ ಏಕೆ ಕೇಳಿಲ್ಲ. ರಾಜ್ಯವನ್ನು ಪ್ರತಿನಿಧಿಸುತ್ತಿರುವ 25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಇವರೆಲ್ಲ ರೈತರ ಬೇಡಿಕೆಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
‘ಮಹದಾಯಿ ಹೋರಾಟ ವಿಷಯದಲ್ಲಿ ಇದುವರೆಗೂ ರಾಜಕಾರಣಿಗಳು ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಮಹದಾಯಿ ನೀರಿಗಾಗಿ ಕಾದು ಕುಳಿತಿರುವ ರೈತರೆಲ್ಲರೂ ಮತ್ತೆ ಒಟ್ಟಾಗಿ ನಿರ್ಣಯ ಕೈಗೊಂಡಿದ್ದು, ಮತ್ತೆ ಹೋರಾಟ ಆರಂಭಿಸುವುದಕ್ಕೆ ಸಜ್ಜಾಗಿದ್ದೇವೆ’ ಎಂದು ಹೇಳಿದರು.