ಹುಬ್ಬಳ್ಳಿ: ಪ್ರಸಕ್ತ ವರ್ಷ ಬೇಸಿಗೆಗೂ ಮುನ್ನ ಫೆಬ್ರುವರಿಯಲ್ಲೇ ಬಿಸಿಲು ಹೆಚ್ಚಾಗಿದ್ದು, ಅತಿ ತಾಪಮಾನವು ಜನರನ್ನು ಹೈರಾಣಾಗಿಸಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು 36.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹಾವೇರಿಯಲ್ಲಿ ದಾಖಲಾಗಿದೆ.
ಕೋಲಾರದಲ್ಲಿ ಅತಿ ಕಡಿಮೆ 30.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರಿನಲ್ಲಿ 31.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಫೆಬ್ರುವರಿ 9ರಂದು 34.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಈ ನಗರದ ಮಟ್ಟಿಗೆ ಈವರೆಗೆ ಫೆಬ್ರುವರಿ ಯಲ್ಲಿ ದಾಖಲಾದ 2ನೇ ಅತಿ ಹೆಚ್ಚು ಉಷ್ಣಾಂಶವಾಗಿದೆ (2005ರ ಫೆಬ್ರುವರಿ 7ರಂದು 35.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗಿತ್ತು). ಬೆಂಗಳೂರಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ 1.5 ಡಿಗ್ರಿ ಸೆಲ್ಸಿಯಸ್ ಸರಾಸರಿ ಉಷ್ಣಾಂಶ ಹೆಚ್ಚಾಗಿದೆ.
23 ಜಿಲ್ಲೆಗಳಲ್ಲಿ ಆರ್ದ್ರತೆ (ಗಾಳಿಯಲ್ಲಿರುವ ಆವಿ) ಪ್ರಮಾಣ ಶೇ 90ಕ್ಕಿಂತ ಹೆಚ್ಚಿದೆ.
ಕಳೆದ ವರ್ಷ ಫೆಬ್ರುವರಿಯಲ್ಲಿ ರಾಜ್ಯದಲ್ಲಿ ಬಿಸಿಲಿನ ತಾಪಮಾನದ ಪ್ರಮಾಣ 38 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿತ್ತು. 2023ರ ಫೆಬ್ರುವರಿಯಲ್ಲಿ ಕಾರವಾರದಲ್ಲಿ 38.8 ಡಿಗ್ರಿ ಸೆಲ್ಸಿಯಸ್, 2022ರಲ್ಲಿ ಮಂಗಳೂರಲ್ಲಿ 37.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು.
‘ನಿರ್ಮಲ ಆಕಾಶ, ಮೋಡಗಳ ಕೊರತೆಯಿಂದ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಗಾಳಿಯ ಪ್ರಮಾಣ ಹೆಚ್ಚಾಗಲಿದೆ. ಉಷ್ಣಾಂಶ ಸ್ವಲ್ಪ ಕಡಿಮೆ ಇರಲಿದ್ದು, ಒಣಹವೆ ಮುಂದುವರಿಯಲಿದೆ. ಮಾರ್ಚ್, ಏಪ್ರಿಲ್ ವೇಳೆಗೆ ಬಿಸಿಲಿನ ಪ್ರಮಾಣ ಮತ್ತಷ್ಟು ಹೆಚ್ಚಳ ಆಗಲಿದೆ. ಬೆಳಿಗ್ಗೆ 11 ರಿಂದ ಸಂಜೆ 4ರವರೆಗೂ ಅತಿ ಬಿಸಿಲು ಇರಲಿದ್ದು, ಈ ಸಮಯದಲ್ಲಿ ಜನರು ಹೊರಗೆ ಓಡಾಡುವುದನ್ನು ಕಡಿಮೆ ಮಾಡಬೇಕು’ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಎ.ಪ್ರಸಾದ ‘ತಿಳಿಸಿದರು.