ಹುಬ್ಬಳ್ಳಿ: ‘ಹೊಸ ಕೋರ್ಟ್ ಕಡೆಯಿಂದ ಹೊಸೂರ ಬಸ್ ನಿಲ್ದಾಣದೊಳಗೆ ಬಂದು ಗ್ರಾಮೀಣ ಬಸ್‌ಗಳ ಕಡೆ ಹೋಗಲು ವೃದ್ಧರಿಗೆ ಮತ್ತು ಅಂಗವಿಕಲರಿಗೆ ತುಂಬಾ ಕಷ್ಟವಾಗುತ್ತಿದೆ. ಮೇಲಿನ ಅಂತಸ್ತಿಗೆ ಹೋಗಲು ನಿಲ್ದಾಣದಲ್ಲಿ ಲಿಫ್ಟ್ ಮಾಡಿದ್ದು, ಅದು ಕೆಟ್ಟು ನಿಂತು ವರ್ಷವಾಗಿದೆ.
ಈವರೆಗೆ ದುರಸ್ತಿಯಾಗಿಲ್ಲ. ನಮ್ಮ ಸಂಕಷ್ಟ ಯಾರೂ ಕೇಳುತ್ತಿಲ್ಲ’.
ಇಲ್ಲಿನ ಹೊಸೂರ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಅದರಲ್ಲೂ ವೃದ್ಧರು, ಅಂಗವಿಕಲರು, ಅನಾರೋಗ್ಯಪೀಡಿತರು, ಮಹಿಳೆಯರು ತೋಡಿಕೊಳ್ಳುವ ಸಂಕಷ್ಟವಿದು. ‘ಹೆಸರಿಗೆ ಮಾತ್ರ ಲಿಫ್ಟ್ ಇದೆಯೇ ಹೊರತು ಅದರಿಂದ ನಮಗೆ ಯಾವ ರೀತಿಯಲ್ಲೂ ಪ್ರಯೋಜನವಾಗಿಲ್ಲ’ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಾರೆ.
‘ಹೊಸೂರ ಬಸ್ ನಿಲ್ದಾಣದ ಆವರಣದಲ್ಲಿ ನಡೆದಾಲು ಪ್ರಯಾಸ ಪಡಬೇಕು. ಮಂಡಿನೋವು ಉಳ್ಳವರಿಗೆ, ಉರುಗೋಲು ಹಿಡಿದು ನಡೆಯುವವರಿಗೆ ಮೆಟ್ಟಿಲು ಹತ್ತಿಳಿಯಲು ಆಗುವುದೇ? ಅಂಗವಿಕಲರು ಹೇಗೆ ತಾನೇ ನಡೆದುಕೊಂಡು ಹೋಗಲು ಆಗುತ್ತದೆ? ಲಿಫ್ಟ್ ಯಾವಾಗ ದುರಸ್ತಿ ಯಾಗುತ್ತದೆ ಎಂಬುದನ್ನು ಕೇಳಿದರೆ, ಯಾರೂ ಸಹ ಸರಿಯಾಗಿ ಉತ್ತರಿಸುವುದಿಲ್ಲ’ ಎಂದು ಹಿರಿಯ ನಾಗರಿಕರಾದ ಈಶ್ವರ ನಾಯ್ಕರ್ ಅಸಹಾಯಕತೆ ವ್ಯಕ್ತಪಡಿಸಿದರು.