ಬೀದರ್: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಸೋಮವಾರ ಸಂಜೆ ನಗರದ ನೆಹರೂ ಕ್ರೀಡಾಂಗಣದ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ನೆರವಿಗೆ ಕಾಯುತ್ತಿದೆ ಆಟ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಭಾನುವಾರ ವರದಿ ಪ್ರಕಟಿಸಿ, ಕ್ರೀಡಾ ವಸತಿ ಶಾಲೆಯಲ್ಲಿ ಸೌಕರ್ಯಗಳ ಕೊರತೆ ಇದೆ ಎಂಬ ಅಂಶ ಉಲ್ಲೇಖಿಸಿತ್ತು.
ವರದಿ ಆಧರಿಸಿ ಕೋಸಂಬೆ ಅವರು ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
‘ಕ್ರೀಡಾ ಇಲಾಖೆಯ ಸುತ್ತೋಲೆ ಪ್ರಕಾರ, ಕ್ರೀಡಾ ವಸತಿ ಶಾಲೆಯಲ್ಲಿ ಇರಬೇಕಾದ ಯಾವುದೇ ರೀತಿಯ ಸೌಲಭ್ಯಗಳು ಇಲ್ಲ. ಕನಿಷ್ಠ ಬೆಡ್, ಕಾಟ್‌ಗಳು ಇಲ್ಲ. ಡ್ರೈಫ್ರುಟ್ಸ್, ಜ್ಯೂಸ್, ಮಾಂಸ, ಮೊಟ್ಟೆ ನಿಯಮಿತವಾಗಿ ಕೊಡುತ್ತಿಲ್ಲ. ಬಯೊಮೆಟ್ರಿಕ್ ಹಾಜರಾತಿ ಇಲ್ಲ. ಶುದ್ಧ ಕುಡಿಯುವ ನೀರು ಇಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎಂಬಂತಹ ಪರಿಸ್ಥಿತಿ ಇದೆ. ಕೂಡಲೇ ಮಕ್ಕಳಿಗೆ ಅಗತ್ಯ ಸೌಕರ್ಯ ಕಲ್ಪಿಸಕೊಡಲು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗೌತಮ್ ಅರಳಿ ಅವರಿಗೆ ಸೂಚನೆ ಕೊಟ್ಟಿದ್ದೇನೆ’ ಎಂದು ಶಶಿಧರ ಕೋಸಂಬೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಟಗಾರರಲ್ಲಿ ಒಬ್ಬರೂ ಬಾಲಕಿಯರಿಲ್ಲ. ಕ್ರೀಡಾಪಟುಗಳಿಗೆ ಸರ್ಕಾರದಿಂದ ಇರುವ ಸೌಲಭ್ಯಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಎಲ್ಲ ತಾಲ್ಲೂಕುಗಳಲ್ಲಿ ಈ ಕುರಿತು ಪ್ರಚಾರ ಕೈಗೊಳ್ಳಬೇಕು. ಕೋರ್ಟ್‌ನಲ್ಲಿ ಕಟ್ಟಡದ ವ್ಯಾಜ್ಯ ಬಗೆಹರಿಯುವವರೆಗೆ ತಾತ್ಕಾಲಿಕವಾಗಿ ಬೇರೆಡೆ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ’ ಎಂದರು.