ಬೀದರ್: ಇಲ್ಲಿನ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿಏರ್ಪಡಿಸಿದ್ದ ನೂಪುರ ನೃತ್ಯ ಅಕಾಡೆಮಿಯ 24ನೇ ರಾಜ್ಯ ‘ನೂಪುರ ನೃತ್ಯೋತ್ಸವ’ ಸಭಿಕರ ಮನಸೂರೆಗೊಳಿಸಿತು.
ಅಕಾಡೆಮಿಯ ನಿರ್ದೇಶಕಿ ಉಷಾ ಪ್ರಭಾಕರ ಹಾಗೂ ಅವರ ತಂಡದವರು ಪ್ರಸ್ತುತಪಡಿಸಿದ ಸಮೂಹ ನೃತ್ಯ, ರಾಮಾಯಣದ ಸನ್ನಿವೇಶಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನೃತ್ಯ, ಸಂಗೀತ, ಜಾನಪದ ಕಲೆಗಳ ಪಾತ್ರ ಮಹತ್ವದ್ದಾಗಿದೆ. ವ್ಯಕ್ತಿಯ ವ್ಯಕ್ತಿಗತ ಬೆಳವಣಿಗೆ ಜೊತೆಗೆ ಸುಂದರ ಸಮಾಜದ ನಿರ್ಮಾಣಕ್ಕೂ ಸಹಕಾರಿಯಾಗಿವೆ ಎಂದರು.
‘ಮನುಷ್ಯನ ಆರೋಗ್ಯಪೂರ್ಣ ಮಾನಸಿಕ ಬೆಳವಣಿಗೆ, ಸಮತೋಲಿತ ಆನಂದಮಯ ಜೀವನ ಶೈಲಿಗೆ, ಕೌಟುಂಬಿಕ ಸಾಮರಸ್ಯಕ್ಕಾಗಿ ನೃತ್ಯ, ಸಂಗೀತ ಮುಂತಾದ ಲಲಿತಕಲೆಗಳು ಅತಿ ಅವಶ್ಯಕ. ಮಕ್ಕಳ ಏಕಾಗ್ರತೆ ಹೆಚ್ಚಿಸಲು, ಅವರ ಸೃಜನಶೀಲ ಬುದ್ದಿವಂತಿಕೆಯ ವಿಕಾಸದಲ್ಲಿ ನೃತ್ಯ, ಸಂಗೀತಗಳು ಪರಿಣಾಮಕಾರಿ ಪಾತ್ರ ವಹಿಸುತ್ತವೆ’ ಎಂದು ಅಭಿಪ್ರಾಯಪಟ್ಟರು.