ನ.26, 27ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ
ಬೆಂಗಳೂರು: ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತ ವಿರೋಧಿಯಾಗಿದೆ. ಕೇಂದ್ರದಲ್ಲಿರುವುದು ಜನಪರ ಸರ್ಕಾರವೋ ಅಥವಾ ಕಾರ್ಪೊರೇಟ್ ಸರ್ಕಾರವೋ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಮತ್ತೆ ಬೃಹತ್ ಹೋರಾಟ ನಡೆಸಲು ರೈತರು ಸಜ್ಜಾಗಿದ್ದಾರೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಕಾರ್ಪೊರೇಟ್ ಕಂಪನಿಗಳಿಗೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ.
ಪ್ರತಿ ವರ್ಷ 1.46 ಲಕ್ಷ ರೂ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಲಾಭದಾಯಕ ಸಾರ್ವಜನಿಕ ಸಂಸ್ಥೆಗಳನ್ನು ಕಾರ್ಪೊರೇಟ್ ಸಂಸ್ಥೆಗಳನ್ನಾಗಿ ಮಾಡಿದರು. ರೈತರ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳ ಕೈವಶವಾಗುವಂತೆ ಮಾಡುತ್ತಿದ್ದಾರೆ.
ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ರೈತರು ತಮ್ಮ ಮೂಲ ವೃತ್ತಿ ತೊರೆಯುವ ನೀತಿ ಜಾರಿ ಮಾಡುತ್ತಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ದೆಹಲಿಯಲ್ಲಿ ನವೆಂಬರ್ 26 ಹಾಗೂ 27ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.